ವಿಶ್ವದಲ್ಲೇ ಅಧಿಕ ; ಭಾರತದಲ್ಲಿ ಶೇ. 15ರಷ್ಟು ಪೈಲಟ್ ಗಳು ಮಹಿಳೆಯರು!
ಸಾಂದರ್ಭಿಕ ಚಿತ್ರ |PC : freepik.com
ಹೊಸದಿಲ್ಲಿ: ಭಾರತದಲ್ಲಿನ ಪೈಲಟ್ ಗಳ ಪೈಕಿ ಶೇ. 15ರಷ್ಟು ಮಹಿಳೆಯರಾಗಿದ್ದು, ಆರು ಪ್ರಮುಖ ಭಾರತೀಯ ವಿಮಾನ ಯಾನ ಸಂಸ್ಥೆಗಳಲ್ಲಿ ನೇಮಕಗೊಂಡಿರುವ ಪ್ರತಿ ಏಳು ಪೈಲಟ್ ಗಳ ಪೈಕಿ ಓರ್ವ ಮಹಿಳಾ ಪೈಲಟ್ ನೇಮಕಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಇಂಡಿಗೊ ವಿಮಾನ ಯಾನ ಸಂಸ್ಥೆ ಅಗ್ರಸ್ಥಾನದಲ್ಲಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದೆ.
ಈ ದೇಶೀಯ ವಿಮಾನ ಯಾನ ಸಂಸ್ಥೆಗಳು ಒಟ್ಟಾಗಿ 11,775 ಪೈಲಟ್ ಗಳನ್ನು ನೇಮಕ ಮಾಡಿಕೊಂಡಿದ್ದು, ಈ ಪೈಕಿ 236 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ. ಭಾರತದಲ್ಲಿ ಒಟ್ಟು 26,539 ಪರವಾನಗಿ ಹೊಂದಿರುವ ಪೈಲಟ್ ಗಳಿದ್ದಾರೆ ಎಂದೂ ತಿಳಿಸಲಾಗಿದೆ.
ಈ ಪೈಕಿ 10,008 ಭಾರತೀಯ ಪುರುಷ ಪೈಲಟ್ ಗಳಿದ್ದು, 1,767 ಭಾರತೀಯ ಮಹಿಳಾ ಪೈಲಟ್ ಗಳಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನ ಯಾನ ರಾಜ್ಯ ಸಚಿವ ಮುರಳೀಧರ್ ಮೊಹೊಲ್ ತಿಳಿಸಿದರು.
ಮಹಿಳಾ ಪೈಲಟ್ ಗಳ ಜಾಗತಿಕ ಸರಾಸರಿ ಶೇ. 5ರಷ್ಟಿದ್ದರೆ, ಭಾರತದಲ್ಲಿನ ಮಹಿಳಾ ಪೈಲಟ್ ಗಳ ಸರಾಸರಿ ಶೇ. 15ರಷ್ಟಿದೆ ಎಂದು ಅವರು ಹೇಳಿದರು.
ಗುರುವಾರ ಮುರಳೀಧರ್ ಮೊಹೊಲ್ ಲೋಕಸಭೆಯ ಮುಂದೆ ಮಂಡಿಸಿದ ಅಂಕಿ-ಅಂಶಗಳ ಪ್ರಕಾರ, ಇಂಡಿಗೊ ವಿಮಾನ ಯಾನ ಸಂಸ್ಥೆ ಅತ್ಯಧಿಕ 5,714 ಪೈಲಟ್ ಗಳನ್ನು ಹೊಂದಿದ್ದು, ಈ ಪೈಕಿ 4,383 ಭಾರತೀಯ ಪುರುಷ ಪೈಲಟ್ ಗಳು, 791 ಭಾರತೀಯ ಮಹಿಳಾ ಪೈಲಟ್ ಗಳು ಹಾಗೂ 34 ಮಂದಿ ವಿದೇಶಿ ಪೈಲಟ್ ಗಳನ್ನು ಹೊಂದಿದೆ.
ಇಂಡಿಗೊ ವಿಮಾನ ಯಾನ ಸಂಸ್ಥೆ ಅತ್ಯಧಿಕ ಸಂಖ್ಯೆಯ ಮಹಿಳಾ ಪೈಲಟ್ ಗಳನ್ನು ಹೊಂದಿದ್ದರೂ, 144 ಪೈಲಟ್ ಗಳನ್ನು ಹೊಂದಿರುವ ಅಲಯನ್ಸ್ ಏರ್ ವಿಮಾನ ಯಾನ ಸಂಸ್ಥೆ, ಈ ಪೈಕಿ 25 ಮಹಿಳಾ ಪೈಲಟ್ ಗಳನ್ನು ನೇಮಕ ಮಾಡಿಕೊಂಡಿದೆ. ಹೀಗಾಗಿ, ಅಲಯನ್ಸ್ ಏರ್ ವಿಮಾನ ಯಾನ ಸಂಸ್ಥೆ ಅತ್ಯಧಿಕ ಸರಾಸರಿ(ಶೇ. 17.36)ಯ ಮಹಿಳಾ ಪೈಲಟ್ ಗಳನ್ನು ಹೊಂದಿದ್ದು, ಇಂಡಿಗೊ ವಿಮಾನ ಯಾನ ಸಂಸ್ಥೆ ಶೇ. 15.28ರಷ್ಟು ಮಹಿಳಾ ಪೈಲಟ್ ಗಳನ್ನು ಹೊಂದಿದೆ.
ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಶೇ. 15.62ರಷ್ಟು ಮಹಿಳಾ ಪೈಲಟ್ ಗಳನ್ನು ಹೊಂದಿದ್ದರೆ (3462 ಪೈಲಟ್ ಗಳ ಪೈಕಿ 541 ಮಹಿಳಾ ಪೈಲಟ್ ಗಳು), ಸ್ಪೈಸ್ ಜೆಟ್ ವಿಮಾನ ಯಾನ ಸಂಸ್ಥೆ ಶೇ. 16.39ರಷ್ಟು (372 ಪೈಲಟ್ ಗಳ ಪೈಕಿ 61 ಮಹಿಳಾ ಪೈಲಟ್ ಗಳು) ಮಹಿಳಾ ಪೈಲಟ್ ಗಳನ್ನು ಹೊಂದಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಸ್ಥೆ ಅತಿ ಕಡಿಮೆ ಪ್ರಮಾಣವಾದ ಶೇ. 12.96ರಷ್ಟು ಮಹಿಳಾ ಪೈಲಟ್ ಗಳನ್ನು ಹೊಂದಿದ್ದರೆ (1,774 ಪೈಲಟ್ ಗಳ ಪೈಕಿ 119 ಮಹಿಳಾ ಪೈಲಟ್ ಗಳು), ಎಸ್ಎನ್ವಿ ಏವಿಯೇಶನ್ ವಿಮಾನ ಯಾನ ಸಂಸ್ಥೆ ಶೇ. 14.01ರಷ್ಟು ಮಹಿಳಾ ಪೈಲಟ್ ಗಳನ್ನು ಹೊಂದಿದೆ (849 ಪೈಲಟ್ ಗಳ ಪೈಕಿ 119 ಮಹಿಳಾ ಪೈಲಟ್ ಗಳು).
ಇನ್ನು, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ 49 ವಿದೇಶಿ ಪೈಲಟ್ ಗಳನ್ನು ಹೊಂದಿದ್ದರೆ, ಅಲಯನ್ಸ್ ಏರ್ ವಿಮಾನ ಯಾನ ಸಂಸ್ಥೆ 20 ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಯಾನ ಸಂಸ್ಥೆ 144 ವಿದೇಶಿ ಪೈಲಟ್ ಗಳನ್ನು ಹೊಂದಿದೆ. ಆದರೆ, ಸ್ಪೈಸ್ ಜೆಟ್ ಹಾಗೂ ಎಸ್ಎನ್ವಿ ಏವಿಯೇಶನ್ ವಿಮಾನ ಯಾನ ಸಂಸ್ಥೆಗಳು ಯಾವುದೇ ವಿದೇಶಿ ಪೈಲಟ್ ಗಳನ್ನು ನೇಮಕ ಮಾಡಿಕೊಂಡಿಲ್ಲ.
ಸೌಜನ್ಯ : deccanherald.com