ಅಧಿಕ ಅತಿ ನೇರಳೆ ವಿಕಿರಣಗಳ ಮಟ್ಟ ಪತ್ತೆ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ರೆಡ್ ಅಲರ್ಟ್

ಸಾಂದರ್ಭಿಕ ಚಿತ್ರ | PC : freepik.com
ತಿರುವನಂತಪುರಂ: ಸೂರ್ಯನ ಕಿರಣಗಳಲ್ಲಿ ಅಧಿಕ ಪ್ರಮಾಣದ ಅತಿ ನೇರಳೆ (Ultra Violet) ವಿಕಿರಣಗಳ ಮಟ್ಟ ಕಂಡು ಬಂದ ಹಿನ್ನೆಲೆಯಲ್ಲಿ, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ರೆಡ್ ಅಲರ್ಟ್ ಘೋಷಿಸಿದೆ.
ಪಾಲಕ್ಕಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳ ತ್ರಿತಳ ಹಾಗೂ ಪೊನ್ನಾನಿ ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಅತಿ ನೇರಳೆ ವಿಕಿರಣ ಮಾಪಕದನ್ವಯ, ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ನೇರಳೆ ವಿಕಿರಣ ಮಟ್ಟ ಸೂಚ್ಯಂಕವು 11 ಎಂದು ದಾಖಲಾಗಿದೆ ಎಂದು ಗುರುವಾರ ಬಿಡುಗಡೆ ಮಾಡಲಾಗಿರುವ ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ದೀರ್ಘಕಾಲ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಸೂರ್ಯನ ಸುಡುವಿಕೆ (Sun Burn), ಚರ್ಮ ರೋಗಗಳು, ನೇತ್ರ ರೋಗಗಳು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಅಪಾಯವಿರುವುದರಿಂದ, ಸಾರ್ವಜನಿಕರು ಸೂಕ್ತ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಕಬೇಕು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಸಿದೆ.
ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ನೇರಳೆ ವಿಕಿರಣ ಸೂಚ್ಯಂಕವು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ನಡುವೆ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಗಿದೆ. ಈ ಅವಧಿಯ ನಡುವೆ ಸಾಧ್ಯವಾದಷ್ಟೂ ದೇಹವನ್ನು ಸೂರ್ಯನ ಕಿರಣಗಳಿಗೆ ದೀರ್ಘಕಾಲ ಒಡ್ಡುವುದರಿಂದ ತಡೆಯಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈ ಅವಧಿಯಲ್ಲಿ ಬಾಹ್ಯ ಕೆಲಸಗಳಲ್ಲಿ ತೊಡಗಿಕೊಂಡಿರುವವರು, ಸಮುದ್ರ ಹಾಗೂ ಒಳ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮೀನುಗಾರರು, ಜಲಸಾರಿಗೆಯಲ್ಲಿ ಭಾಗಿಯಾಗಿರುವವರು, ಬೈಕ್ ಸವಾರರು, ಪ್ರವಾಸಿಗಳು, ಚರ್ಮ ರೋಗ, ನೇತ್ರ ರೋಗ ಹೊಂದಿರುವ ವ್ಯಕ್ತಿಗಳು, ಕ್ಯಾನ್ಸರ್ ರೋಗಿಗಳು ಹಾಗೂ ದುರ್ಬಲ ರೋಗ ಪ್ರತಿರೋಧಕ ವ್ಯವಸ್ಥೆ ಹೊಂದಿರುವವರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.
ಇಡೀ ದೇಹವನ್ನು ಮುಚ್ಚುವ ಹತ್ತಿ ಬಟ್ಟೆಯನ್ನು ಧರಿಸಬೇಕು ಎಂದ ಜನರಿಗೆ ಸಲಹೆ ನೀಡಲಾಗಿದ್ದು, ಬೆಳಗಿನ ಹೊತ್ತು ಹೊರಗೆ ಹೋಗುವಾಗ, ಟೊಪ್ಪಿ, ಛತ್ರಿ ಹಾಗೂ ಸನ್ ಗ್ಲಾಸ್ ಗಳನ್ನು ಬಳಸಬೇಕು ಎಂದೂ ಸೂಚಿಸಲಾಗಿದೆ.
ಅತಿ ಎತ್ತರದ ಪ್ರದೇಶಗಳು ಹಾಗೂ ಉಷ್ಣವಲಯದ ಪ್ರಾಂತ್ಯಗಳಲ್ಲಿ ಸಾಮಾನ್ಯವಾಗಿ ಅತ್ಯಧಿಕ ಪ್ರಮಾಣದ ಅತಿ ನೇರಳೆ ವಿಕಿರಣ ಸೂಚ್ಯಂಕಗಳು ಕಂಡು ಬರುತ್ತವೆ. ಮೋಡವಿಲ್ಲದ ಶುಭ್ರ ಆಕಾಶವಿದ್ದರೂ, ಈ ಪ್ರಾಂತ್ಯಗಳಲ್ಲಿ ಅತಿ ನೇರಳೆ ವಿಕಿರಣ ಸೂಚ್ಯಂಕ ಪ್ರಮಾಣ ಅಧಿಕವಾಗಿಯೇ ಇರಲಿದೆ.
ಅತಿ ನೇರಳೆ ವಿಕಿರಣಗಳನ್ನು ಪ್ರತಿಫಲಿಸುವ ನೀರು ಹಾಗೂ ಮರಳಿನ ಮೇಲ್ಪದರದಲ್ಲಿ ಅತಿ ನೇರಳೆ ವಿಕಿರಣ ಸೂಚ್ಯಂಕ ಪ್ರಮಾಣ ಅತ್ಯಧಿಕವಾಗಿರುವ ಸಾಧ್ಯತೆ ಇದೆ ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.