ಹೆದ್ದಾರಿಗಳಲ್ಲಿ ಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ: ಕೇಂದ್ರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಎಲ್ಲ ಟೋಲ್ಪ್ಲಾಜಾಗಳ ಬಳಿ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 40-60 ಕಿ.ಮೀ.ಅಂತರದಲ್ಲಿ ರಸ್ತೆಬದಿಯ ಸೌಲಭ್ಯಗಳನ್ನು ಸೃಷ್ಟಿಸುವುದು ಸರಕಾರದ ಗುರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರು ಮಂಗಳವಾರ ಲಿಖಿತ ಉತ್ತರದಲ್ಲಿ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಒದಗಿಸಿರುವ ಮಾಹಿತಿಗಳನ್ನು ಅವರು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.
2015ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ(ಎನ್ಎಚ್ಎ)ದ ವ್ಯಾಪ್ತಿಯಲ್ಲಿರುವ ಯೋಜನಾ ಪ್ರದೇಶಗಳಲ್ಲಿಯ ಟೋಲ್ಪ್ಲಾಜಾಗಳಲ್ಲಿ ಅಥವಾ ಅವುಗಳ ಸಮೀಪ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ಬ್ಲಾಕ್ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ ಸಚಿವರು, ಅಲ್ಲದೆ ಹೆದ್ದಾರಿಗಳಲ್ಲಿ ಯಾವುದೇ ಸಮಸ್ಯೆ( ಶೌಚಾಲಯಗಳು/ಸಾರ್ವಜನಿಕ ಸೌಲಭ್ಯಗಳು ಸೇರಿದಂತೆ)ಗಳನ್ನು ವರದಿ ಮಾಡಲು ಜನರಿಗೆ ಸಾಧ್ಯವಾಗುವಂತೆ ಎನ್ಎಚ್ಎಐ ಇತ್ತೀಚಿಗೆ ರಾಜಮಾರ್ಗ ಯಾತ್ರಾ ಆ್ಯಪ್ನ್ನು ಅಭಿವೃದ್ಧಿಗೊಳಿಸಿದೆ ಎಂದು ತಿಳಿಸಿದರು.
ಪ್ರಾಧಿಕಾರವು ತನ್ನ ಆಂತರಿಕ ಕಾರ್ಯವಿಧಾನದ ಭಾಗವಾಗಿ ಮತ್ತು ಸಾರ್ವಜನಿಕ ಸೌಲಭ್ಯಗಳ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಇತ್ತೀಚಿಗೆ ಆ್ಯಪ್ನಲ್ಲಿ ಶೌಚಾಲಯ ಸ್ವಚ್ಛತೆಗಾಗಿ ಮಾಡ್ಯೂಲ್ನ್ನು ಒದಗಿಸಿದ್ದು,ಇದರಡಿ ಶೌಚಾಲಯಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ಅವುಗಳ ಸ್ವಚ್ಛತೆಯನ್ನು ದೃಢಪಡಿಸಿಕೊಳ್ಳಲು ಎಐ ಸಾಧನಗಳನ್ನು ಬಳಸಲಾಗುತ್ತದೆ.
ಆ್ಯಪ್ನಲ್ಲಿ 1,300ಕ್ಕೂ ಅಧಿಕ ಶೌಚಾಲಯ ಬ್ಲಾಕ್ಗಳನ್ನು ಅವುಗಳ ಸ್ವಚ್ಛತೆಯ ಮೇಲ್ವಿಚಾರಣೆಗಾಗಿ ನೋಂದಾಯಿಸಲಾಗಿದೆ ಎಂದು ಉತ್ತರದಲ್ಲಿ ತಿಳಿಸಿರುವ ಚೌಹಾಣ, ಟೋಲಿಂಗ್ ಏಜೆನ್ಸಿಗಳ ಒಪ್ಪಂದಗಳು ಶೌಚಾಲಯಗಳ ನಿರ್ವಹಣೆಗಾಗಿ ಕಟ್ಟುನಿಟ್ಟಾದ ನಿಬಂಧನೆಗಳನ್ನು ಹೊಂದಿರುತ್ತವೆ ಮತ್ತು ಇವುಗಳನ್ನು ಉಲ್ಲಂಘಿಸಿದರೆ ಪ್ರಾಧಿಕಾರವು ಪ್ರತಿ ತಿಂಗಳಿಗೆ ಒಂದು ಲ.ರೂ.ಗಳ ದಂಡವನ್ನು ವಿಧಿಸಬಹುದು. ಈವರೆಗೆ ಟೋಲಿಂಗ್ ಏಜೆನ್ಸಿಗಳಿಗೆ ಅಂದಾಜು 46 ಲ.ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.