ಹಿಜಾಬ್ ವಿವಾದ | ಶಾಲೆಯಲ್ಲಿ ಹಿಜಾಬ್ ಧರಿಸಲು ಮುಸ್ಲಿಂ ವಿದ್ಯಾರ್ಥಿಗೆ ಅನುಮತಿ: ಡಿಡಿಇ ನಿರ್ದೇಶನಕ್ಕೆ ತಡೆ ನೀಡಲು ಕೇರಳ ಹೈಕೋರ್ಟ್ ನಕಾರ

ಸಾಂದರ್ಭಿಕ ಚಿತ್ರ
ಕೊಚ್ಚಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(CBSE)ಯಡಿ ನೋಂದಣಿಗೊಂಡಿರುವ ಶಾಲೆಯೊಂದರ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರಿಗೆ ಹಿಜಾಬ್ ಧರಿಸಿಕೊಂಡು ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಿರುವ ಎರ್ನಾಕುಲಂನ ಉಪ ಶಿಕ್ಷಣ ನಿರ್ದೇಶಕರ ನಿರ್ದೇಶನಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ ಕೇರಳ ಹೈಕೋರ್ಟ್, ಈ ಕುರಿತು ಸರಕಾರದಿಂದ ಸೂಚನೆ ಪಡೆಯುವಂತೆ ರಾಜ್ಯ ಅಟಾರ್ನಿಗೆ ಸೂಚಿಸಿತು.
ಕ್ರಿಶ್ಚಿಯನ್ ಆಡಳಿತ ಮಂಡಳಿ ನಡೆಸುತ್ತಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಡಿ ನೋಂದಣಿಗೊಂಡಿರುವ ಸೇಂಟ್ ರೀಟಾಸ್ ಪಬ್ಲಿಕ್ ಶಾಲೆಯ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರಿಗೆ ಹಿಜಾಬ್ ಧರಿಸಿಕೊಂಡು ತರಗತಿಗಳಿಗೆ ಹಾಜರಾಗಲು ಅನುಮತಿ ನೀಡಿ ಎರ್ನಾಕುಲಂನ ಉಪ ಶಿಕ್ಷಣ ನಿರ್ದೇಶಕರು ನಿರ್ದೇಶನ ಹೊರಡಿಸಿದ್ದರು. ಈ ನಿರ್ದೇಶನವನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು.
ದೂರುದಾರ ಶಾಲೆಯ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿ.ಜಿ.ಅರುಣ್, ಉಪ ಶಿಕ್ಷಣ ನಿರ್ದೇಶಕರ ನಿರ್ದೇಶನಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದರು. ಆದರೆ, ಶಾಲೆಯು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಡಿ ನೋಂದಣಿಗೊಂಡಿರುವುದರಿಂದ, ಅದರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದೂ ಅಭಿಪ್ರಾಯಪಟ್ಟರು.
“ನಾನೇನೂ ಮಾಡಲಾಗುವುದಿಲ್ಲ ಎಂಬುದು ನಿಮಗೆ ತಿಳಿದಿದೆ. ಕೇವಲ ಆದೇಶ ನೀಡಲೆಂದು ನಾನು ಆದೇಶಿಸಲು ಸಾಧ್ಯವಿಲ್ಲ. ರಾಜ್ಯ ಅಟಾರ್ನಿ ಅವರು ಸರಕಾರದಿಂದ ಸೂಚನೆ ಪಡೆಯಲಿ” ಎಂದು ಹೇಳುವ ಮೂಲಕ, ಶಾಲೆಯ ಮಧ್ಯಂತರ ತಡೆ ಮನವಿಯನ್ನು ತಳ್ಳಿ ಹಾಕಿದರು.
ಸಮವಸ್ತ್ರ ನೀತಿಗೆ ಸಂಬಂಧಿಸಿದಂತೆ ಬೆದರಿಕೆಗಳು ಹಾಗೂ ಶಾಲಾ ಆವರಣದೊಳಕ್ಕೆ ಉದ್ರಿಕ್ತ ಗುಂಪು ನುಗ್ಗುತ್ತಿರುವುದರಿಂದ, ನಮ್ಮ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪೊಲೀಸ್ ರಕ್ಷಣೆ ನೀಡುವಂತೆ ಕೋರಿ ಇದಕ್ಕೂ ಮುನ್ನ ಅರ್ಜಿದಾರ ಶಾಲೆಯು ಕೇರಳ ಹೈಕೋರ್ಟ್ ಗೆ ಮೊರೆ ಹೋಗಿತ್ತು. ಈ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಆ ಸಂದರ್ಭದಲ್ಲಿ ಶಾಲೆಗೆ ಭದ್ರತೆ ಮಂಜೂರು ಮಾಡಿತ್ತು.
ಹಾಲಿ ಅರ್ಜಿಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ವಸ್ತ್ರಗಳನ್ನು ಧರಿಸಲು ಅನುಮತಿ ನೀಡುವ ಯಾವುದೇ ಕಾಯ್ದೆಯನ್ನು ಕೇರಳ ಸರಕಾರ ಜಾರಿಗೆ ತಂದಿಲ್ಲ ಹಾಗೂ ಇಂತಹ ಅನುಮತಿಗಳು ಶಾಲೆಗಳ ಜಾತ್ಯತೀತತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣಕ್ಕೆ ಧಕ್ಕೆ ತರುತ್ತವೆ ಎಂದು ಶಾಲೆ ವಾದಿಸಿದೆ. ಅನುದಾನರಹಿತ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಡಿ ನೋಂದಣಿಗೊಂಡಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದಕ್ಕೆ ನಿಗದಿತ ವಸ್ತ್ರ ಸಂಹಿತೆಯನ್ನು ಸಡಿಲಿಸುವಂತೆ ಸೂಚಿಸುವ ಮೂಲಕ, ಉಪ ಶಿಕ್ಷಣ ನಿರ್ದೇಶಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿದ್ದಾರೆ ಎಂದೂ ಅದು ವಾದಿಸಿತು.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಡಿ ನೋಂದಣಿಗೊಂಡಿರುವ ಶಾಲೆಗಳ ಆಡಳಿತವು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಡಿ ಬರುತ್ತದೆಯೇ ಹೊರತು ರಾಜ್ಯ ಶಿಕ್ಷಣ ಇಲಾಖೆಯಡಿಯಲ್ಲ ಎಂದೂ ಶಾಲಾ ಆಡಳಿತ ಮಂಡಳಿ ವಾದಿಸಿತು. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಹಕ್ಕುಗಳು ಸಾಂಸ್ಥಿಕ ಶಿಸ್ತಿನ ಮೇಲೆ ಸವಾರಿ ಮಾಡುವಂತಿಲ್ಲ ಎಂದು 2018ರಲ್ಲಿ ಫಾತಿಮಾ ತನ್ಸೀಮ್ ಮತ್ತಿತರರು ಮತ್ತು ಕೇರಳ ರಾಜ್ಯ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಉಪ ಶಿಕ್ಷಣ ನಿರ್ದೇಶಕರ ನಿರ್ದೇಶನವನ್ನು ರದ್ದುಗೊಳಿಸಬೇಕು, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಡಿ ನೋಂದಣಿಗೊಂಡಿರುವ ಶಾಲೆಗಳ ಮೇಲೆ ರಾಜ್ಯ ಪ್ರಾಧಿಕಾರಗಳು ಯಾವುದೇ ಕಾನೂನಾತ್ಮಕ ವ್ಯಾಪ್ತಿ ಹೊಂದಿಲ್ಲ ಎಂದು ಘೋಷಿಸಬೇಕು ಹಾಗೂ ನಮ್ಮ ಸಂಸ್ಥೆಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ಬಂಧಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಕೊಚ್ಚಿಯ ಪಲ್ಲುರುತಿಯಲ್ಲಿನ ಸೇಂಟ್ ರೀಟಾಸ್ ಪಬ್ಲಿಕ್ ಶಾಲೆಯ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ತರಗತಿಗೆ ಹಿಜಾಬ್ ಧರಿಸಿಕೊಂಡು ಹಾಜರಾಗುವ ಮೂಲಕ, ಶಾಲೆಯ ಸಮವಸ್ತ್ರ ನೀತಿಯನ್ನು ಉಲ್ಲಂಘಿಸಿದ್ದಾಳೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿವಾದ ಭುಗಿಲೆದ್ದಿತ್ತು.
ವಿದ್ಯಾರ್ಥಿನಿಯನ್ನು ಶಾಲೆಗೆ ದಾಖಲಿಸಿಕೊಳ್ಳುಲವ ಸಮಯದಲ್ಲೇ ಈ ನಿಯಮವನ್ನು ವಿದ್ಯಾರ್ಥಿನಿಯ ಪೋಷಕರಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು ಹಾಗೂ ಈ ನಿಯಮವನ್ನು ಪಾಲಿಸಲು ಅವರು ಒಪ್ಪಿಗೆ ಸೂಚಿಸಿದ್ದರು ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಬಳಿಕ, ಶಾಲೆಯ ಸಮವಸ್ತ್ರ ನೀತಿಯನ್ನು ಪಾಲಿಸುವುದಾಗಿ ವಿದ್ಯಾರ್ಥಿನಿಯ ತಂದೆ ಒಪ್ಪಿಕೊಂಡರೂ, ನಂತರ, ಈ ವಿವಾದದಿಂದಾಗಿ ಮಾನಸಿಕ ಒತ್ತಡಕ್ಕೀಡಾಗಿದ್ದು, ನನ್ನ ಪುತ್ರಿಯನ್ನು ಆ ಶಾಲೆಯಿಂದ ಬಿಡಿಸಿ, ಬೇರೊಂದು ಕಡೆ ದಾಖಲಿಸುತ್ತೇವೆ ಎಂದು ಹೇಳಿದ್ದರು.







