ಹಿಮಾಚಲ: ನಿವೃತ್ತ ಸೇನಾ ಕರ್ನಲ್ ದಂಪತಿಯನ್ನು ‘ಡಿಜಿಟಲ್ ಬಂಧನ’ದಲ್ಲಿರಿಸಿ 49 ಲಕ್ಷ ರೂ.ಸುಲಿಗೆ!

ಸಾಂದರ್ಭಿಕ ಚಿತ್ರ | PC : freepik.com
ಹಾಮೀರ್ಪುರ: ಸೈಬರ್ ವಂಚಕನೊಬ್ಬ ಹಿಮಾಚಲ ಪ್ರದೇಶದಲ್ಲಿ ನಿವೃತ್ತ ಸೇನಾ ಕರ್ನಲ್ ಹಾಗೂ ಅವರ ಪತ್ನಿಯನ್ನು ಸೈಬರ್ ಕ್ರಿಮಿನಲ್ಗಳು, ‘ಡಿಜಿಟಲ್ ಬಂಧನ’ದಲ್ಲಿರಿಸಿ ಅವರಿಂದ 49 ಲಕ್ಷ ರೂ. ಸುಲಿಗೆ ಮಾಡಿದ್ದಾನೆಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ನಿವೃತ್ತ ಸೇನಾಧಿಕಾರಿಗೆ ವ್ಯಕ್ತಿಯೊಬ್ಬ ವಾಟ್ಸಾಪ್ನಲ್ಲಿ ವೀಡಿಯೊ ಕರೆ ಮಾಡಿ ತನ್ನನ್ನು ಮುಂಬೈ ಕ್ರೈಂ ಬ್ರಾಂಚ್ ನ ಅಧಿಕಾರಿಯೆಂದು ಅವರಿಗೆ ಪರಿಚಯಿಸಿಕೊಂಡಿದ್ದ. ನಿವೃತ್ತ ಸೇನಾಧಿಕಾರಿಯ ಆಧಾರ್ ಕಾರ್ಡ್ ಬಳಸಿಕೊಂಡು ಯಾರೋ ನಾಲ್ಕು ಸಿಮ್ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಮುಂಬೈಯಲ್ಲಿ ಬ್ಯಾಂಕ್ ಖಾತೆಯೊಂದನ್ನು ತೆರೆದು ಅದರ ಮೂಲಕ 2 ಕೋಟಿ ರೂ. ಕಪ್ಪುಹಣವನ್ನು ಬಿಳುಪುಗೊಳಿಸಿದ್ದಾರೆಂದು ವಂಚಕನು ಅವರಿಗೆ ಹೆದರಿಸಿದ್ದನು.
ದಂಪತಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವುದಾಗಿಯೂ ಆತ ಬೆದರಿಕೆ ಹಾಕಿದ್ದನು. ದಂಪತಿಯಲ್ಲಿರುವ ಹಣದ ಮೂಲದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬೆದರಿಸಿದ ಆರೋಪಿಯು, ಸೇನಾಧಿಕಾರಿಯಿಂದ 49 ಲಕ್ಷ ರೂ. ಪಾವತಿಸುವಂತೆ ಆಗ್ರಹಿಸಿದ್ದ. ನಿವೃತ್ತ ಸೇನಾಧಿಕಾರಿಯು ಆತನಿಗೆ ಮಾರ್ಚ್ 29ರಂದು 9 ಲಕ್ಷ ರೂ. ಹಾಗೂ ಎಪ್ರಿಲ್ 4ರಂದು 40 ಲಕ್ಷ ರೂ. ವರ್ಗಾಯಿಸಿದ್ದರು.
ಮಾರ್ಚ್ 23ರಂದು ಅವರಿಗೆ ಮೊದಲನೆ ಕರೆ ಬಂದಿದ್ದು ಸುಮಾರು 11 ತಾಸುಗಳ ಕಾಲ ಅವರನ್ನು ನಿಗಾವಣೆಯಲ್ಲಿರಿಸಿದ್ದನು. ವಂಚಕನು ನೀಡಿದ್ದ ಬ್ಯಾಂಕ್ ಖಾತೆಗೆ ಸೇನಾಧಿಕಾರಿಯುರು ಆರ್ಟಿಜಿಎಸ್ ಮೂಲಕ ಹಣವನ್ನು ವರ್ಗಾಯಿಸುವಾಗಲೂ ದಂಪತಿಯನ್ನು ವೀಡಿಯೊ ಕಾಲ್ನಲ್ಲಿ ಇರಿಸಲಾಗಿತ್ತು.
ಮಾಂಡಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ವಂಚನೆಯ ಪ್ರಕರಣ ದಾಖಲಾಗಿದ್ದು, ಕೆಲವು ಶಂಕಾಸ್ಪದ ಖಾತೆಗಳಿಂದ 5.58 ಲಕ್ಷ ರೂ.ಗಳನ್ನು ಮುಟ್ಟುಗೋಲು ಹಾಕಿದೆ. ದಂಪತಿಯು 22 ಖಾತೆಗಳಿಗೆ ವರ್ಗಾವಣೆಗೊಳಿಸಿದ್ದ ಹಣವನ್ನು ಆರೋಪಿಯು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ..







