ಹಿಮಾಚಲ |ಕೋಮುಉದ್ವಿಗ್ನತೆ, ಸಿರಮೌರ್ ಜಿಲ್ಲೆಯ ಗ್ರಾಮಗಳಲ್ಲಿ ಜೂ.26ರವರೆಗೆ ನಿಷೇಧಾಜ್ಞೆ ವಿಸ್ತರಣೆ

ಸಾಂದರ್ಭಿಕ ಚಿತ್ರ | PC : PTI
ನಹಾನ್: ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಸಿರಮೌರ್ ಜಿಲ್ಲೆಯ ಪೌಂಟಾ ಸಾಹಿಬ್ ಪ್ರದೇಶದ ಗ್ರಾಮಗಳಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಜೂನ್ 26ರವರೆಗೆ ಹೇರಲಾಗಿದೆ.
ಅಂತರ್ಧರ್ಮೀಯ ಜೋಡಿಯೊಂದರ ಪಲಾಯನಕ್ಕೆ ಸಂಬಂಧಿಸಿ ಜೂನ್ 13ರಂದು ಈ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಯುಂಟಾಗಿತ್ತು.
ಕೋಮು ಉದ್ವಿಗ್ನತೆ ಹಾಗೂ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಪ್ರಕ್ಷುಬ್ದವಾಗಿರುವ ಹಿನ್ನೆಲೆಯಲ್ಲಿ ಪೌಂಟಾ ಉಪವಿಭಾಗದ ಮಾಜ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಿರಾತಪುರ, ಮಾಲಿಯೊನ್, ಫತೇಪುರ, ಮಿಸ್ಸಾರ್ವಾಲಾ ಹಾಗೂ ಮಾಜ್ರಾ ಈ ಐದು ಗ್ರಾಮಗಲ್ ಜೂನ್ 13ರಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಈಗ ಅದನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ವರ್ಮಾ ಅವರು ಜೂನ್ 26ರವರೆಗೆ ವಿಸ್ತರಿಸಿದ್ದಾರೆ ಎಂದು ಗುರುವಾರ ತಡರಾತ್ರಿ ಬಿಡುಗಡೆಗೊಳಿಸಲಾದ ಆದೇಶವು ತಿಳಿಸಿದೆ.
ಆದೇಶದ ಪ್ರಕಾರ 2023ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 163ರ ಅನ್ವಯ ಈ ಐದು ಗ್ರಾಮಗಳಲ್ಲಿ ಐವರು ಅಥವಾ ಅದಕ್ಕಿಂತಹೆಚ್ಚಿನ ವ್ಯಕ್ತಿಗಳು ಸಭೆ ಸೇರುವುದನ್ನು ನಿಷೇಧಿಸಲಾಗಿದೆ. ಮಾರಕಾಸ್ತ್ರಗಳನ್ನು ಒಯ್ಯುವುದು, ಸಾರ್ವಜನಿಕ ರ್ಯಾಲಿ, ಮೆರವಣಿಗೆ ಅಥವಾ ನಿರಶನ ನಡೆಸುವುದನ್ನು ಮತ್ತು ದಹನಕಾರಿ ವಸ್ತುಗಳನ್ನು ಕೊಂಡೊಯುವುದನ್ನು ನಿಷೇಧಿಸಲಾಗಿದೆ.
ಜೂನ್ 13ರಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಸಂದರ್ಭ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.ಗಲಭೆಯಲ್ಲಿ ಪೊಲೀಸರು ಹಾಗೂ ಮಹಿಳೆಯರು ಸೇರಿದಂತೆ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಬಿಂದಾಲ್ ಹಾಗೂ ಪೌಂಟಾ ಬಿಜೆಪಿ ಶಾಸಕ ಸುಖರಾಮ್ ಚೌಧರಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು. ಆದರೆ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.







