ಹಿಮಾಚಲ ಪ್ರದೇಶ | ಭೂಕುಸಿತ; ನಾಲ್ವರು ಮೃತ್ಯು, ಇಬ್ಬರು ನಾಪತ್ತೆ

PC: PTI
ಸಿಮ್ಲಾ, ಆ. 28: ಹಿಮಾಚಲಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಇತರ ಇಬ್ಬರು ನಾಪತ್ತೆಯಾಗಿದ್ದಾರೆ.
ರಾವಿ ನದಿ ಉಕ್ಕಿ ಹರಿಯುತ್ತಿದ್ದು, ಸಂಪೂರ್ಣ ಗ್ರಾಮ ನೆರೆ ಸಂತ್ರಸ್ತವಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬಸೋಂಧನ್ ಗ್ರಾಮದಲ್ಲಿ ಬೆಟ್ಟದ ಇಳಿಜಾರಿನಲ್ಲಿ ಬಂಡೆಗಳು ಉರುಳುವುದನ್ನು ನೋಡಲು ಹೋದ ಅಣ್ಣ ಹಾಗೂ ತಂಗಿ ಭೂಕುಸಿತ ಸಂಭವಿಸಿ ಜೀವಂತ ಸಮಾಧಿಯಾಗಿದ್ದಾರೆ.
ಮೆಹ್ಲಾದಲ್ಲಿ ಪ್ರತ್ಯೇಕ ಭೂಕುಸಿತದ ಘಟನೆಗಳಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ನೆರೆ ಸಂತ್ರಸ್ತ ಚಂಬಾ ಜಿಲ್ಲೆಯಲ್ಲಿ ಇಬ್ಬರು ನಿವಾಸಿಗಳು ನಾಪತ್ತೆಯಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮಣಿಮಹೇಶ್ ಯಾತ್ರೆಯ ಸಂದರ್ಭ ಬಂಡೆ ಬಿದ್ದು ಕೆಲವರು ಗಾಯಗೊಂಡಿದ್ದಾರೆ. ಹಡ್ಸರ್ ಜಲಪಾತದ ಮೇಲೆ ಚಾರಣ ಮಾಡುತ್ತಿದ್ದಾಗ ಡೊನಾಲಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ಅವರಿಗೆ ಭರ್ಮೌರ್ ಆಸ್ಪತ್ರೆಯಲ್ಲಿ ಆರಂಭದಲ್ಲಿ ಚಿಕಿತ್ಸೆ ನೀಡಲಾಯಿತು. ಅನಂತರ ಚಂಬಾ ವೈದ್ಯಕೀಯ ಕಾಲೇಜಿಗೆ ಏರ್ಲಿಫ್ಟ್ ಮಾಡಲಾಯಿತು.
ಭರ್ಮೌರ್ ವಿಧಾನ ಸಭಾ ಕ್ಷೇತ್ರ ಹೋಲಿ ಪ್ರದೇಶದ ಸಲೂನ್ ಗ್ರಾಮ ರಾವಿ ನದಿ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದೆ. ಗ್ರಾಮ ಮುಳುಗಿರುವ ಬಗ್ಗೆ ಸ್ಥಳೀಯ ಶಾಸಕ ಡಾ. ಜನಕ್ ರಾಜ್ ದೃಢಪಡಿಸಿದ್ದಾರೆ. ಈ ಸಂದರ್ಭ ಜನರನ್ನು ತೆರವುಗೊಳಿಸಿರುವುದರಿಂದ ಜೀವ ಹಾನಿ ಉಂಟಾಗಿಲ್ಲ ಎಂದು ಅವರು ತಿಳಿಸಿದ್ದಾರೆ.







