ಹಿಮಾಚಲಪ್ರದೇಶ | ದಲಿತ ವಿದ್ಯಾರ್ಥಿಗೆ ಹಲ್ಲೆ; ಸರಕಾರಿ ಶಾಲೆಯ ಮೂವರು ಅಧ್ಯಾಪಕರ ವಿರುದ್ಧ ಪ್ರಕರಣ

ಸಾಂದರ್ಭಿಕ ಚಿತ್ರ
ಶಿಮ್ಲಾ, ನ. 3: ಎಂಟು ವರ್ಷದ ದಲಿತ ಬಾಲಕನಿಗೆ ಹಲ್ಲೆ ನಡೆಸಿದ ಹಾಗೂ ಆತನ ಪ್ಯಾಂಟ್ ಒಳಗೆ ಚೇಳು ಬಿಟ್ಟ ಆರೋಪದಲ್ಲಿ ಹಿಮಾಚಲಪ್ರದೇಶದ ಶಿಮ್ಲಾದ ಸರಕಾರಿ ಶಾಲೆಯ ಮುಖ್ಯಾಪಾಧ್ಯಾಯ ಸೇರಿದಂತೆ ಮೂವರು ಅಧ್ಯಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರೊಹರು ಉಪ ವಿಭಾಗೀಯ ಖಡ್ಡಾಪಾನಿ ಪ್ರದೇಶದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ 1ನೇ ತರಗತಿಯ ವಿದ್ಯಾರ್ಥಿ ಮೇಲೆ ಮುಖ್ಯೋಪಾದ್ಯಾಯ ದೇವೇಂದ್ರ ಹಾಗೂ ಶಿಕ್ಷಕರಾದ ಬಾಬು ರಾಮ್ ಹಾಗೂ ಕೃತಿಕಾ ಠಾಕೂರ್ ಸುಮಾರು ಒಂದು ವರ್ಷದಿಂದ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಾಲಕನ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.
ಮತ್ತೆ ಮತ್ತೆ ಥಳಿಸಿರುವುದರಿಂದ ಬಾಲಕನ ಕಿವಿಗೆ ಹಾನಿ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಒಂದು ಬಾರಿ ಅಧ್ಯಾಪಕರು ಆತನನ್ನು ಶಾಲೆಯ ಶೌಚಾಲಯಕ್ಕೆ ಕರೆದು ಕೊಂಡು ಹೋಗಿ ಪ್ಯಾಂಟ್ ನ ಒಳಗೆ ಚೇಳು ಬಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯೋಪಾಧ್ಯಾಯ ದೇವೇಂದ್ರ ಹಾಗೂ ಅಧ್ಯಾಪಕರಾದ ಬಾಬು ರಾಮ್ ಹಾಗೂ ಕೃತಿಕಾ ಠಾಕೂರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಅವರ ವಿರುದ್ಧ ಬಾಲ ನ್ಯಾಯ ಕಾಯ್ದೆ ನಿಯಮಗಳು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ನಿಯಮಗಳ ಅಡಿಯಲ್ಲಿ ಕೂಡ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







