ಅಸ್ಸಾಂ ಎಸ್ಐಆರ್| ಬಿಜೆಪಿ ಕಾರ್ಯಕರ್ತರಿಂದ 5 ಲಕ್ಷಕ್ಕೂ ಅಧಿಕ ದೂರು ದಾಖಲು: ಸಿಎಂ ಹಿಮಾಂತ ಬಿಸ್ವಾ ಶರ್ಮಾ

ಹಿಮಾಂತ ಬಿಸ್ವಾ ಶರ್ಮಾ | Photo Credit : PTI
ಹೊಸದಿಲ್ಲಿ, ಜ. 29: ಅಸ್ಸಾಂನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಸಂದರ್ಭ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಶಂಕಿತ ವಿದೇಶಿಯರ ವಿರುದ್ಧ 5 ಲಕ್ಷಕ್ಕೂ ಅಧಿಕ ದೂರುಗಳನ್ನು ಸಲ್ಲಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಬುಧವಾರ ಹೇಳಿದ್ದಾರೆ.
ಶಿವಸಾಗರ್ ಜಿಲ್ಲೆಯ ಡೆಮೊದಲ್ಲಿ ಬುಧವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆ ಸಂದರ್ಭ ದೂರು ಸಲ್ಲಿಸುವುದು ರಾಷ್ಟ್ರೀಯ ಕರ್ತವ್ಯ ಎಂದರು.
‘‘ಬಾಂಗ್ಲಾದೇಶಿ ಮಿಯಾ ವಲಸಿಗರು ರಾಜ್ಯ ಪ್ರವೇಶಿಸಿರುವುದು ಅಸ್ಸಾಂನ ಪ್ರತಿಯೊಬ್ಬರಿಗೂ ತಿಳಿದಿದೆ. ಎಸ್ಐಆರ್ ಅಡಿಯಲ್ಲಿ ಯಾರೊಬ್ಬರೂ ನೋಟಿಸು ಸ್ವೀಕರಿಸದೇ ಇದ್ದರೆ, ಅರ್ಥವೇನು? ಅಸ್ಸಾಂನಲ್ಲಿ ವಿದೇಶಿ ಪ್ರಜೆಗಳು ಇಲ್ಲ ಎಂದರ್ಥವೇ’’ ಎಂದು ಅವರು ಪ್ರಶ್ನಿಸಿದ್ದಾರೆ.
ಆದುದರಿಂದಲೇ ನಮ್ಮ ಕಾರ್ಯಕರ್ತರು 5 ಲಕ್ಷಕ್ಕೂ ಅಧಿಕ ದೂರುಗಳನ್ನು ದಾಖಲಿಸಿದ್ದಾರೆ. ಇಲ್ಲದೆ ಇದ್ದರೆ, ಎಲ್ಲರೂ ಕಾನೂನುಬದ್ಧರಾಗುತ್ತಿದ್ದರು ಎಂದು ಹೇಳಿದ್ದಾರೆ.





