ಹಿಂಡೆನ್ಬರ್ಗ್ ಆರೋಪ | ಅದಾನಿ ಸಮೂಹಕ್ಕೆ ಸೆಬಿ ಕ್ಲೀನ್ ಚಿಟ್

PC : PTI
ಹೊಸದಿಲ್ಲಿ: ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್ಬರ್ಗ್ ರಿಸರ್ಚ್ ಮಾಡಿದ್ದ ಆರೋಪಗಳ ಪರಿಶೀಲನೆಯ ಬಳಿಕ, ಭಾರತೀಯ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ & ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಉದ್ಯಮಿ ಗೌತಮ್ ಆದಾನಿ ಮತ್ತು ಅವರ ಕಂಪೆನಿ ಸಮೂಹಕ್ಕೆ ಕ್ಲೀನ್ ಚಿಟ್ ನೀಡಿ ಪ್ರಕರಣಕ್ಕೆ ಅಂತ್ಯಹಾಡಿದೆ.
2020 ರಲ್ಲಿ ಆದಾನಿ ಗುಂಪಿನ ನಾಲ್ಕು ಕಂಪೆನಿಗಳು ಹಣಕಾಸು ಮಾಹಿತಿಯನ್ನು ಸರಿಯಾಗಿ ಬಹಿರಂಗಪಡಿಸದೆ 6.2 ಬಿಲಿಯನ್ ರೂ. ($87.4 ಮಿಲಿಯನ್) ಸಾಲ ನೀಡಿದ್ದಾಗಿ ಹಿಂಡೆನ್ಬರ್ಗ್ ಆರೋಪಿಸಿತ್ತು. ನಂತರ ಅಡಿಕಾರ್ಪ್ ಎಂಟರ್ ಪ್ರೈಸಸ್ ಕಂಪೆನಿಯು ಅದಾನಿ ಪವರ್ ಗೆ 6.1 ಬಿಲಿಯನ್ ರೂ. ($86 ಮಿಲಿಯನ್) ಸಾಲ ನೀಡಿತ್ತು ಎಂದು ಹಿಂಡೆನ್ಬರ್ಗ್ ಹೇಳಿದೆ.
ಆದರೆ ಸೆಬಿ ಸಂಪೂರ್ಣ ತನಿಖೆ ನಡೆಸಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ, ಈ ವ್ಯವಹಾರಗಳು ಕಾನೂನಿನ ಚೌಕಟ್ಟಿನಲ್ಲಿ ನಡೆದಿದ್ದು, ಪಟ್ಟಿ ಒಪ್ಪಂದ (LODR) ನಿಯಮಗಳನ್ನು ಉಲ್ಲಂಘಿಸಿಲ್ಲವೆಂದು ತೀರ್ಮಾನಿಸಿದೆ.
ಈ ಕುರಿತು ಮಾರುಕಟ್ಟೆ ನಿಯಂತ್ರಕ SEBI ತನ್ನ ಹೇಳಿಕೆಯಲ್ಲಿ, ಈ ವ್ಯವಹಾರಗಳು "ಸಂಬಂಧಿತ ವ್ಯಾಪಾರಿಗಳ ವಹಿವಾಟುಗಳು" ಎಂಬ ಅರ್ಹತೆ ಹೊಂದಿದ್ದು, ಯಾವುದೇ ದುರುದ್ದೇಶವಿಲ್ಲದ್ದು ಸ್ಪಷ್ಟವಾಗಿದೆ ಎಂದು ಉಲ್ಲೇಖಿಸಿದೆ.
ಈ ಆದೇಶದಲ್ಲಿ ಆದಾನಿ ಪೋರ್ಟ್ಸ್ & SEZ ಲಿಮಿಟೆಡ್, ಆದಾನಿ ಪವರ್ ಲಿಮಿಟೆಡ್, ಅಡಿಕಾರ್ಪ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ಗೌತಮ್ ಶಾಂತಿಲಾಲ್ ಆದಾನಿ ಮತ್ತು ರಾಜೇಶ್ ಶಾಂತಿಲಾಲ್ ಆದಾನಿ ಹೆಸರುಗಳು ಸೇರಿವೆ. ಸೆಬಿ ಈ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಚ್ಚುವ ನಿರ್ಧಾರವನ್ನು ಮಾಡಿದೆ ಎಂದು ತಿಳಿದು ಬಂದಿದೆ.







