ಉತ್ತರ ಪ್ರದೇಶ | ಶ್ರಾವಣ ಮಾಸ ಹಿನ್ನೆಲೆ ಕೆಎಫ್ಸಿ, ನಝೀರ್ ಫುಡ್ಸ್ ಮಳಿಗೆಗಳನ್ನು ಬಲವಂತವಾಗಿ ಬಂದ್ ಮಾಡಿಸಿದ ಹಿಂದುತ್ವ ಸಂಘಟನೆಯ ಕಾರ್ಯಕರ್ತರು

PC : X \ @sardesairajdeep
ಲಕ್ನೋ : ಉತ್ತರ ಪ್ರದೇಶದ ಗಾಝಿಯಾಬಾದ್ನಲ್ಲಿ ಶ್ರಾವಣ ಮಾಸ ಮತ್ತು ಕನ್ವರ್ ಯಾತ್ರೆಯ ಹಿನ್ನೆಲೆ ಮಾಂಸ ಮಾರಾಟಕ್ಕೆ ವಿರೋಧಿಸಿ ಹಿಂದೂ ರಕ್ಷಾ ದಳದ ಕಾರ್ಯಕರ್ತರು ಪ್ರಸಿದ್ಧ ಕೆಎಫ್ಸಿ ಮತ್ತು ನಝೀರ್ ಫುಡ್ಸ್ ಮಳಿಗೆಗಳನ್ನು ಬಲವಂತವಾಗಿ ಬಂದ್ ಮಾಡಿಸಿದ್ದಾರೆ ಎಂದು ವರದಿಯಾಗಿದೆ.
ಶ್ರಾವಣ ಮಾಸ ಮತ್ತು ಕನ್ವರ್ ಯಾತ್ರೆ ವೇಳೆ ಗಾಝಿಯಾಬಾದ್ನ ವಸುಂಧರಾ ಪ್ರದೇಶದಲ್ಲಿ ಮಾಂಸಾಹಾರ ಮಾರಾಟಕ್ಕೆ ನಿಷೇಧ ವಿಧಿಸಿಲ್ಲ. ಆದರೆ, ಹಿಂದುತ್ವ ಗುಂಪಿನ ಸದಸ್ಯರು ಅಂಗಡಿಗಳಿಗೆ ನುಗ್ಗಿ ಬಲವಂತವಾಗಿ ಬಂದ್ ಮಾಡಿಸಿದ್ದಾರೆ.
ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಹಿಂದುತ್ವ ಕಾರ್ಯಕರ್ತರು ʼಭಾರತ್ ಮಾತಾ ಕಿ ಜೈʼ ಮತ್ತು ʼಜೈ ಶ್ರೀ ರಾಮ್ʼ ಎಂದು ಘೋಷಣೆಗಳನ್ನು ಕೂಗುತ್ತಿರುವುದು ಮತ್ತು ಅಂಗಡಿಯ ಬಾಗಿಲು ಮುಚ್ಚುವಂತೆ ಆಗ್ರಹಿಸುವುದು ಕಂಡು ಬಂದಿದೆ.
ʼಇದು ಹಿಂದೂ ಜನಸಂಖ್ಯೆಯ ಪ್ರದೇಶವಾದ್ದರಿಂದ ನಾವು ಕೆಎಫ್ಸಿ ಮತ್ತು ನಝೀರ್ ಫುಡ್ಸ್ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಕನ್ವರ್ ಯಾತ್ರೆ ನಡೆಯುತ್ತಿವೆ. ಆದರೆ, ಇಲ್ಲಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ಹಿಂದೂಗಳು ಇಲ್ಲಿಯೇ ಇರುವಾಗ ನೀವು ಅವರ ಭಾವನೆಗಳಿಗೆ ಗೌರವಿಸದಿರುವುದು ಹೇಗೆ ಸಾಧ್ಯ? ಇದು ನಮ್ಮ ಹಬ್ಬ ಮತ್ತು ಯಾರಾದರೂ ಸಮಸ್ಯೆ ಮಾಡಲು ಪ್ರಯತ್ನಿಸಿದರೆ ನಾವು ಪ್ರತಿಭಟನೆ ನಡೆಸುತ್ತೇವೆʼ ಎಂದು ಈ ವೇಳೆ ಗುಂಪಿನಲ್ಲಿದ್ದ ವ್ಯಕ್ತಿಯೋರ್ವ ಹೇಳಿದ್ದಾರೆ.
ʼಅವರು ತಮ್ಮ ಅಂಗಡಿಗಳನ್ನು ಬಂದ್ ಮಾಡಬೇಕು. ಈ ಕೆಎಫ್ಸಿ ಮತ್ತು ನಝೀರ್ ಫುಡ್ಸ್ ಮಳಿಗೆಗಳು ಮತ್ತೆ ತೆರೆದರೆ, ನಾವು ಇದೇ ರೀತಿಯ ಪ್ರತಿಭಟನೆಯನ್ನು ನಡೆಸಿ ಅವುಗಳನ್ನು ಬಂದ್ ಮಾಡುತ್ತೇವೆʼ ಎಂದು ಮತ್ತೋರ್ವ ಹೇಳಿದ್ದಾನೆ.







