ಮಧುರೈ ಮೀನಾಕ್ಷಿ ದೇವಾಲಯದಲ್ಲಿ ‘ಹಿಂದೂ’ ಎಂಬುದಕ್ಕೆ ಸಾಕ್ಷಿ ಕೇಳಿದರು : ಬಿಜೆಪಿ ನಾಯಕಿ, ನಟಿ ನಮಿತಾ ಆರೋಪ

ಮೀನಾಕ್ಷಿ ಸುಂದರೇಶ್ವರ ದೇವಾಲಯ
ಮಧುರೈ : ತಮಿಳುನಾಡಿನ ಮಧುರೈಯಲ್ಲಿರುವ ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸುವಂತೆ ದೇವಾಲಯದ ಅಧಿಕಾರಿಗಳು ಕೇಳಿದರು ಎಂದು ಬಿಜೆಪಿ ನಾಯಕಿ, ನಟಿ ನಮಿತಾ ಬುಧವಾರ ಆರೋಪಿಸಿದ್ದಾರೆ.
ದೇವಾಲಯದ ಅಧಿಕಾರಿಗಳು ತನಗೆ ದರ್ಶನಕ್ಕೆ ಅವಕಾಶ ನೀಡಲಿಲ್ಲ ಹಾಗೂ ಹಿಂದೂ ಎಂಬುದಕ್ಕೆ ಪುರಾವೆ ಕೇಳಿದರು ಎಂದು ಬಿಜೆಪಿಯ ರಾಜ್ಯ ಕಾರ್ಯಕಾರಿ ಸದಸ್ಯೆಯಾಗಿರುವ ನಟಿ ನಮಿತಾ ಹೇಳಿದ್ದಾರೆ.
‘‘ನಾನು ಹಿಂದೂ ಎಂಬುದನ್ನು ಸಾಬೀತುಪಡಿಸಲು ಅವರು ಪ್ರಮಾಣ ಪತ್ರ ಕೇಳಿದರು. ಅವರು ನನ್ನ ಜಾತಿ ಪ್ರಮಾಣ ಪತ್ರವನ್ನು ಕೂಡ ಕೇಳಿದರು. ನಾನು ದೇಶದಲ್ಲಿ ಭೇಟಿ ನೀಡಿದ ಇತರ ಯಾವುದೇ ದೇವಾಲಯಗಳಲ್ಲಿ ಇಂತಹ ಸಮಸ್ಯೆಯನ್ನು ಎದುರಿಸಿಲ್ಲ’’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ನಾನು ಹಿಂದೂ ಧರ್ಮದಲ್ಲಿ ಜನಿಸಿರುವುದು, ನನ್ನ ವಿವಾಹ ತಿರುಪತಿಯಲ್ಲಿ ನೆರವೇರಿವುದು ಹಾಗೂ ನನಗೆ ಕೃಷ್ಣ ಎಂಬ ಹೆಸರಿನ ಪುತ್ರನಿರುವುದು ಎಲ್ಲರಿಗೂ ತಿಳಿದಿರುವ ವಿಚಾರ” ಎಂದು ಅವರು ಹೇಳಿದ್ದಾರೆ.
ಆದರೆ, ನಮಿತಾ ಅವರ ಈ ಆರೋಪವನ್ನು ದೇವಾಲಯದ ಹಿರಿಯ ಅಧಿಕಾರಿ ನಿರಾಕರಿಸಿದ್ದಾರೆ. ಮಾಸ್ಕ್ ಧರಿಸಿದ್ದ ನಮಿತಾ ಹಾಗೂ ಅವರ ಪತಿಯನ್ನು ನಾವು ತಡೆದೆವು. ಅಲ್ಲದೆ, ಅವರು ಹಿಂದೂಗಳೇ ಎಂದು ವಿಚಾರಣೆ ನಡೆಸಿದೆವು ಹಾಗೂ ದೇವಾಲಯದ ಸಂಪ್ರದಾಯವನ್ನು ಅವರಿಗೆ ವಿವರಿಸಿದೆವು ಎಂದು ಅವರು ತಿಳಿಸಿದ್ದಾರೆ.
‘‘ಅವರು ಸ್ಪಷ್ಟನೆ ನೀಡಿದ ಬಳಿಕ ನಮಿತಾ ಅವರು ಹಣೆಗೆ ಕುಂಕುಮ ಇರಿಸಿಕೊಂಡರು. ಅನಂತರ ಅವರನ್ನು ಮೀನಾಕ್ಷಿಯ ದರ್ಶನಕ್ಕೆ ದೇವಾಲಯದ ಒಳಗೆ ಕರೆದೊಯ್ಯಲಾಯಿತು’’ ಎಂದು ಅವರು ತಿಳಿಸಿದ್ದಾರೆ







