ಜ್ಞಾನವಾಪಿ ಮಸೀದಿ ; ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಿದ ಹಿಂದೂ ಅರ್ಚಕರ ಕುಟುಂಬ
Photo: PTI
ವಾರಣಾಸಿ: ವಾರಣಾಸಿಯ ಜ್ಞಾನವಾಪಿ ಮಸೀದಿಯ ಕೆಳಗಿರುವ ನೆಲ ಮಾಳಿಗೆಯಲ್ಲಿ ಹಿಂದೂ ಅರ್ಚಕರ ಕುಟುಂಬದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ನೆಲ ಮಾಳಿಗೆಯ ಬೀಗ ಮುದ್ರೆಯನ್ನು ತೆರವುಗೊಳಿಸಬೇಕು ಎಂದು ಬುಧವಾರ ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ನಂತರ ಇದೀಗ ಬೀಗ ಮುದ್ರೆಯನ್ನು ತೆರವುಗೊಳಿಸಲಾಗಿದೆ. ಇದಕ್ಕೂ ಮುನ್ನ ಬಾಬರಿ ಮಸೀದಿ ಧ್ವಂಸಗೊಂಡ ಕೆಲ ಸಮಯದ ಬಳಿಕ ಜ್ಞಾನವಾಪಿ ಮಸೀದಿ ಕೆಳಗಿನ ನೆಲ ಮಾಳಿಗೆಗೆ ಬೀಗ ಮುದ್ರೆ ಹಾಕಲಾಗಿತ್ತು ಎಂದು ndtv.com ವರದಿ ಮಾಡಿದೆ.
“ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಿಲ್ಲಾಡಳಿತವು ಅದಕ್ಕಾಗಿ ಇನ್ನು ಒಂದು ವಾರದೊಳಗೆ ವ್ಯವಸ್ಥೆ ಮಾಡಬೇಕಿದೆ. ಎಲ್ಲರಿಗೂ ಪ್ರಾರ್ಥನೆ ಸಲ್ಲಿಸುವ ಹಕ್ಕಿದೆ” ಎಂದು ಹಿಂದೂ ಅರ್ಜಿದಾರರ ಪರ ವಕೀಲರಾದ ವಿಷ್ಣು ಶಂಕರ್ ಜೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಶಿ ವಿಶ್ವನಾಥ ದೇವಾಲಯದ ಬಲ ಬದಿಯಲ್ಲಿ, ಮಸೀದಿಯ ಬಳಿ ಇರುವ ‘ವ್ಯಾಸ್ ಕ ಠಿಕಾಣ’ ಎಂದು ಕರೆಯಲಾಗುವ ಈ ಪ್ರದೇಶಕ್ಕೆ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದರಿಂದ ಕಳೆದ ರಾತ್ರಿ ಈ ಪ್ರದೇಶವು ಆತಂತ ಸೃಷ್ಟಿಯಾಗಿತ್ತು. ಮಸೀದಿಯ ಬಳಿಯಿರುವ ನಾಮಫಲಕದ ಮೇಲೆ ಹಿಂದೂ ಸಂಘಟನೆಯಾದ ರಾಷ್ಟ್ರೀಯ ಹಿಂದೂ ದಳವು ಮಂದಿರ ಎಂಬ ಚೀಟಿಯನ್ನು ಅಂಟಿಸುತ್ತಿರುವುದು ಕಂಡು ಬಂದಿತು. ಪೂಜೆಯು ಮುಂಜಾನೆ 3 ಗಂಟೆಗೆ ಪ್ರಾರಂಭಗೊಂಡಿತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸ್ಥಳದಲ್ಲಿ ಭಾರಿ ಪ್ರಮಾಣದ ಪೊಲೀಸ್ ಬಂದೋಬಸ್ತ್ ಅನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.