ರಾಹುಲ್ ಗಾಂಧಿ ಭಾಷಣದ ಕುರಿತ ಪೋಸ್ಟ್: ಹಿಂದುತ್ವವಾದಿ ರೌಶನ್ ಸಿನ್ಹಾಗೆ ನಿರೀಕ್ಷಣಾ ಜಾಮೀನು

ರೌಶನ್ ಸಿನ್ಹಾ (Photo: X/@MrSinha)
ಹೊಸದಿಲ್ಲಿ: 2024ರ ಚುನಾವಣೆಗಳ ಬಳಿಕ ಸಂಸತ್ತಿನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಮೊದಲ ಭಾಷಣವನ್ನು ತಪ್ಪಾಗಿ ಉಲ್ಲೇಖಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿರುವ ಹಿಂದುತ್ವ ಸಾಮಾಜಿಕ ಮಾಧ್ಯಮ ಪ್ರಭಾವಿ ರೌಶನ್ ಸಿನ್ಹಾಗೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ರಾಹುಲ್ ಗಾಂಧಿ ಹಿಂದೂಗಳನ್ನು ‘ಹಿಂಸಾತ್ಮಕ’ ಎಂದು ಕರೆದಿದ್ದಾರೆ ಎಂದು ಸಿನ್ಹಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ಪೋಸ್ಟ್ ವಿರುದ್ಧ ತೆಲಂಗಾಣದ ಕಾಂಗ್ರೆಸ್ ಕಾರ್ಯಕರ್ತರೋರ್ವರ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ನಿಬಂಧನೆಗಳಡಿ ಸಿನ್ಹಾ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳವಾರ ನ್ಯಾಯಮೂರ್ತಿಗಳಾದ ದೀಪಂಕರ ದತ್ತ ಮತ್ತು ಅರವಿಂದ ಕುಮಾರ್ ಅವರ ಪೀಠವು ಸಿನ್ಹಾಗೆ ಬಂಧನ ಪೂರ್ವ ಜಾಮೀನು ನಿರಾಕರಿಸಿದ್ದ ತೆಲಂಗಾಣ ಉಚ್ಚ ನ್ಯಾಯಾಲಯದ ಎ.3ರ ಆದೇಶವನ್ನು ತಳ್ಳಿಹಾಕಿತು.
ಪೊಲೀಸರು ಜೂನ್ನಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು, ಇನ್ನು ಮುಂದೆ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ ಎಂದು ಹೇಳಿ ಸಿನ್ಹಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.
ಸಿನ್ಹಾ ತನಿಖೆಗೆ ಸಹಕರಿಸುವುದನ್ನು ಮುಂದುವರಿಸಬೇಕು ಮತ್ತು ಸಾಕ್ಷಿಗಳ ಮೆಲೆ ಪ್ರಭಾವ ಬೀರಲು ಪ್ರಯತ್ನಿಸಬಾರದು ಎಂದು ತಾಕೀತು ಮಾಡಿದ ಸರ್ವೋಚ್ಚ ನ್ಯಾಯಾಲಯವು, ಈ ನಿಬಂಧನೆಗಳನ್ನು ಮೀರಿದರೆ ಜಾಮೀನನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.







