ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟರೆ ಮಹಾನಗರ ಪಾಲಿಕೆಗಳೇ ಹೊಣೆ: ಮಹಾರಾಷ್ಟ್ರ ಸರಕಾರಕ್ಕೆ ಬಾಂಬೆ ಹೈಕೋರ್ಟ್ ಆದೇಶ

ಸಾಂದರ್ಭಿಕ ಚಿತ್ರ
ಮುಂಬೈ: ರಸ್ತೆ ಗುಂಡಿ ಸಂಬಂಧಿತ ಅಪಘಾತಗಳಿಗೆ ಮಹಾನಗರ ಪಾಲಿಕೆಗಳನ್ನು ಹೊಣೆಗಾರರನ್ನಾಗಿಸಿ ಹಾಗೂ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಎಂದು ಮಹಾರಾಷ್ಟ್ರ ಸರಕಾರಕ್ಕೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಕಳಪೆ ಗುಣಮಟ್ಟದ ರಸ್ತೆಗಳಿಂದ ಸಂಭವಿಸುವ ಗಾಯಗಳು ಹಾಗೂ ಸಾವುಗಳಿಗೆ ಸ್ಥಳೀಯ ಸಂಸ್ಥೆಗಳು ಹಾಗೂ ಅಧಿಕಾರಿಗಳನ್ನ ಉತ್ತರದಾಯಿಗಳನ್ನಾಗಿಸಬೇಕು ಎಂದು ಅದು ಒತ್ತಿ ಹೇಳಿದೆ.
ಗುರುವಾರ ಈ ಕುರಿತು ವಿಚಾರಣೆ ನಡೆಸಿದ ನ್ಯಾ. ರೇವತಿ ಮೋಹಿತೆ ಮತ್ತು ನ್ಯಾ. ಸಂದೇಶ್ ಬಿ.ಪಾಟೀಲ್ ಅವರನ್ನೊಳಗೊಂಡ ನ್ಯಾಯಪೀಠ, ರಸ್ತೆ ಗುಂಡಿ ಅಪಘಾತದ ಸಂತ್ರಸ್ತರು ಹಾಗೂ ಅವರು ಕುಟುಂಬಗಳಿಗೆ ಪರಿಹಾರ ಒದಗಿಸಲು ನೀತಿ ಚೌಕಟ್ಟೊಂದನ್ನು ರೂಪಿಸಿ ಎಂದು ಸರಕಾರಿ ವಕೀಲ ಒ.ಎಸ್.ಚಂದೂರ್ಕರ್ ಅವರಿಗೆ ಸೂಚಿಸಿತು.
“ರಸ್ತೆ ಗುಂಡಿ ಗಾಯ ಹಾಗೂ ಸಾವುಗಳ ಬಗ್ಗೆ ಸರಕಾರವೇನಾದರೂ ನೀತಿಯೊಂದನ್ನು ರೂಪಿಸಲಿದೆಯೆ? ಮಹಾನಗರ ಪಾಲಿಕೆಗಳನ್ನು ಅವರ ಕೃತ್ಯಗಳಿಗೆ ಉತ್ತರದಾಯಿಗಳನ್ನಾಗಿಸಬೇಕು. ಅವರ ವೇತನಗಳಿಂದ ಪರಿಹಾರ ಮೊತ್ತವನ್ನು ವಸೂಲಿ ಮಾಡಿ. ಅದು ಅಲ್ಪ ದಂಡವಾಗಿರಕೂಡದು. ಅವರಿಗೆ ಅದರ ಬಾಧೆ ಅರ್ಥವಾಗಬೇಕು” ಎಂದೂ ನ್ಯಾಯಪೀಠ ಹೇಳಿತು.





