187 ಹೋಮ್ಗಾರ್ಡ್ ಹುದ್ದೆಗೆ 8,000ಕ್ಕೂ ಅಧಿಕ ಅಭ್ಯರ್ಥಿಗಳು: ರನ್ವೇಯಲ್ಲಿ ಪರೀಕ್ಷೆ!

Photo Credit : PTI
ಭುವನೇಶ್ವರ, ಡಿ. 22: ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ ಎನ್ನುವುದನ್ನು ವಿವರಿಸುವ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. ಇತ್ತೀಚೆಗೆ 187 ಹೋಮ್ಗಾರ್ಡ್ ಹುದ್ದೆಗಳಿಗಾಗಿ 8,000ಕ್ಕೂ ಅಧಿಕ ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ.
ಇಷ್ಟೊಂದು ಜನರಿಗೆ ಒಮ್ಮೆಲೆ ಹೇಗೆ ಪರೀಕ್ಷೆ ಮಾಡುವುದು? ಅದಕ್ಕಾಗಿ ರನ್ವೇಯೊಂದನ್ನು ಆಯ್ಕೆ ಮಾಡಲಾಯಿತು. ಅಭ್ಯರ್ಥಿಗಳೆಲ್ಲರೂ ಸಂಬಾಲ್ಪುರ ರನ್ವೇಯಲ್ಲಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆದರು.
ಈ ಪರೀಕ್ಷೆಗೆ ಹಾಜರಾದ ಕೆಲವು ಅಭ್ಯರ್ಥಿಗಳು ಎಮ್ಬಿಎ ಮತ್ತು ಎಮ್ಸಿಎ ಪದವಿಗಳನ್ನು ಪಡೆದವರಾಗಿದ್ದರು. ಒಡಿಶಾದಲ್ಲಿ ಹೋಮ್ಗಾರ್ಡ್ಗಳಿಗೆ 639 ರೂಪಾಯಿ ದೈನಂದಿನ ಭತ್ತೆ ನೀಡಲಾಗುತ್ತದೆ.
‘‘ನೇಮಕಾತಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದರು. ಕಣ್ಗಾವಲಿಗಾಗಿ ಡ್ರೋನ್ಗಳನ್ನೂ ನಿಯೋಜಿಸಲಾಗಿತ್ತು’’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ವಿರಾಟ ನಿರುದ್ಯೋಗ ಸಮಸ್ಯೆಯ ನಗ್ನದರ್ಶನ’
ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಟಿಎಮ್ಸಿ ಪಕ್ಷವು ರಾಜ್ಯದ ನಿರುದ್ಯೋಗ ಪರಿಸ್ಥಿತಿಯ ಬಗ್ಗೆ ಬಿಜೆಪಿಯನ್ನು ಟೀಕಿಸಿದೆ.
ನೇಮಕಾತಿ ಪರೀಕ್ಷೆಯ ವೀಡಿಯೊವೊಂದನ್ನು ಎಕ್ಸ್ನಲ್ಲಿ ಹಾಕಿರುವ ಟಿಎಮ್ಸಿ, ‘‘ಇದು ಸಿನೇಮಾ ದೃಶ್ಯವಲ್ಲ. ಇದು ಬಿಜೆಪಿ ಆಡಳಿತದ ಒಡಿಶಾ. ಇಲ್ಲಿ ಎಮ್ಬಿಎ ಮತ್ತು ಎಮ್ಸಿಎ ಪದವೀಧರರು ಸೇರಿದಂತೆ 8,000ಕ್ಕೂ ಅಧಿಕ ಆಕಾಂಕ್ಷಿಗಳು ಕೇವಲ 187 ಹೋಮ್ಗಾರ್ಡ್ ಹುದ್ದೆಗಳಿಗೆ ಸ್ಪರ್ಧಿಸುತ್ತಿದ್ದಾರೆ’’ ಎಂದು ಹೇಳಿದೆ.
‘‘ಇದು ಬಿಜೆಪಿಯ ಡಬಲ್ ಇಂಜಿನ್ ಸರಕಾರದ ಕಟು ವಾಸ್ತವ. ಪದವಿಗಳು ಇವೆ. ಆದರೆ, ಕೆಲಸ ಎಲ್ಲಿಯೂ ಇಲ್ಲ. ನಿರುದ್ಯೋಗ ಎನ್ನುವುದು ಆಕಸ್ಮಿಕವಲ್ಲ; ಅದು ಬಿಜೆಪಿಯ ಸಾಧನೆ. ನಿರುದ್ಯೋಗದ ವಿರಾಟ್ ಸಮಸ್ಯೆಯ ನಗ್ನದರ್ಶನ’’ ಎಂದು ಅದು ಬಣ್ಣಿಸಿದೆ.







