ಒಳನುಸುಳುವಿಕೆ ಯತ್ನ| ಬಾಂಗ್ಲಾ ಗಡಿಯಲ್ಲಿ ಗರಿಷ್ಠ: ಗೃಹ ಸಚಿವಾಲಯ

Photo Credit : PTI
ಹೊಸದಿಲ್ಲಿ,ಡಿ.18: ದೇಶದ ಭೂಗಡಿಗಳ ಪೈಕಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಒಳನುಸುಳುವಿಕೆಯ ಯತ್ನಗಳು ಹಾಗೂ ಬಂಧನಗಳು ನಡೆದಿವೆ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಲೋಕಸಭೆಗೆ ತಿಳಿಸಿದೆ.
ಪಶ್ಚಿಮಬಂಗಾಳದ ಟಿಎಂಸಿ ಸದಸ್ಯರಾದ ಜಗದೀಶ್ ಚಂದ್ರ ಬರ್ಮಾ ಬಾಸುನಿಯಾ ಹಾಗೂ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ಈ ಕುರಿತು ಕೇಳಿದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಬಾಂಗ್ಲಾದೇಶ, ಚೀನಾ, ಪಾಕಿಸ್ತಾನ, ನೇಪಾಳ, ಭೂತಾನ್ ಹಾಗೂ ಮ್ಯಾನ್ಮಾರ್ ಗಡಿಯುದ್ದಕ್ಕೂ ನಡೆದಿದ್ದ ಒಳನುಸುಳುವಿಕೆ ಯತ್ನಗಳ ಕುರಿತಾದ ವರ್ಷವಾರು ದತ್ತಾಂಶವನ್ನು ಹಂಚಿಕೊಂಡರು.
ಜನವರಿ ಹಾಗೂ ನವೆಂಬರ್ ನಡುವೆ ಭಾರತ-ಬಾಂಗ್ಲಾ ಗಡಿಯಲ್ಲಿ 1104 ಒಳನುಸುಳುವಿಕೆ ಯತ್ನಗಳು ನಡೆದಿರುವುದನ್ನು ಪತ್ತೆ ಹಚ್ಚಲಾಗಿದೆ. ಇದೇ ಅವಧಿಯಲ್ಲಿ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಲು ಯತ್ನಿಸಿದ 2556 ಮಂದಿಯನ್ನು ಬಂಧಿಸಲಾಗಿದೆ.
ಭಾರತದ ಗಡಿಗಳಾದ್ಯಂತ 2014ರಿಂದೀಚೆಗೆ ಭದ್ರತಾ ಏಜೆನ್ಸಿಗಳು 8500ಕ್ಕೂ ಅಧಿಕ ಒಳನುಸುಳುವಿಕೆಯ ಯತ್ನಗಳನ್ನು ವಿಫಲಗೊಳಿಸಿದ್ದು, 20,800ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.ಈ ಪೈಕಿ ಬಾಂಗ್ಲಾದೇಶದ ಗಡಿಯೊಂದರಿಂದಲೇ 7528 ಒಳನುಸುಳುವಿಕೆಯ ಯತ್ನಗಳು ನಡೆದಿವೆ ಹಾಗೂ 18,851 ಮಂದಿಯ ಬಂಧನವಾಗಿದೆ, ಆದರೆ ಚೀನಾ ಗಡಿಯಿಂದ ಯಾವುದೇ ಒಳನುಸುಳುವಿಕೆಯ ಪ್ರಕರಣಗಳು ವರದಿಯಾಗಿಲ್ಲ.
2289.66 ಕಿ.ಮೀ. ವಿಸ್ತೀರ್ಣದ ಭಾರತ-ಪಾಕ್ ಗಡಿಯಲ್ಲಿ 2014ರಿಂದೀಚೆಗೆ 420 ಒಳನುಸುಳುವಿಕೆ ಯತ್ನಗಳು ನಡೆದಿದ್ದು, 560 ಮಂದಿಯ ಬಂಧನವಾಗಿದೆ.
ಇದೇ ಅವಧಿಯಲ್ಲಿ 1643 ಕಿ.ಮೀ. ವಿಸ್ತೀರ್ಣದ ಮ್ಯಾನ್ಮಾರ್ ಗಡಿಯಲ್ಲಿ 250 ಒಳನುಸುಳುವಿಕೆ ಯತ್ನಗಳಾಗಿದ್ದು,, 1150 ಮಂದಿಯ ಬಂಧನವಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.







