ಪೆರೋಲ್ ನಲ್ಲಿರುವ ಕೈದಿಗಳ ಮೇಲೆ ನಿಗಾಕ್ಕೆ ಜಿಪಿಎಸ್ ಸಾಧನ ಬಳಸಿ: ರಾಜ್ಯಗಳಿಗೆ ಕೇಂದ್ರದ ಸೂಚನೆ

Photo : ndtv - ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೈದಿಗಳು ಪೆರೋಲ್ ನಲ್ಲಿ ಜೈಲಿನಿಂದ ಬಿಡುಗಡೆಗೊಂಡಾಗ ಅವರ ಮೇಲೆ ನಿಗಾಯಿರಿಸಲು ರಾಜ್ಯಗಳು ಜಿಪಿಎಸ್ ಸಾಧನಗಳನ್ನು ಬಳಸಬಹುದು ಎಂದು ಕೇಂದ್ರ ಗೃಹ ಸಚಿವಾಲಯವು ಸೂಚಿಸಿದೆ.
ಸಚಿವಾಲಯದ ಈ ಸಲಹೆಯು ಮಾದರಿ ಜೈಲುಗಳ ಕಾಯ್ದೆ ೨೦೨೩ರ ಭಾಗವಾಗಿದ್ದು,ಈ ಕಾಯ್ದೆಯನ್ನು ಕಳೆದ ಮೇ ತಿಂಗಳಲ್ಲಿ ಎಲ್ಲ ರಾಜ್ಯಗಳಿಗೆ ವಿತರಿಸಲಾಗಿತ್ತು. ಸೋಮವಾರ ಮೊದಲ ಬಾರಿಗೆ ಕಾಯ್ದೆಯ ಪ್ರತಿಯನ್ನು ಸಚಿವಾಲಯದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಕೈದಿಗಳ ಚಲನವಲನ ಮತ್ತು ಚಟುವಟಿಕೆಗಳ ಮೆಲೆ ನಿಗಾಯಿರಿಸಲು ಜಿಪಿಎಸ್ ಸಾಧನಗಳನ್ನು ಧರಿಸಿರಬೇಕು ಎಂಬ ಷರತ್ತಿಗೆ ಅವರ ಒಪ್ಪಿಗೆಯೊಂದಿಗೆ ಅವರಿಗೆ ಪೆರೋಲ್ ಮಂಜೂರು ಮಾಡಬಹುದು. ಇದನ್ನು ಉಲ್ಲಂಘಿಸಿದರೆ ಪೆರೋಲ್ ರದ್ದಾಗುತ್ತದೆ ಮತ್ತು ಭವಿಷ್ಯದಲ್ಲಿ ಪೆರೋಲ್ ಪಡೆಯಲು ಆತ ಆರ್ಹನಾಗುವುದಿಲ್ಲ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಈ ತಿಂಗಳ ಆರಂಭದಲ್ಲಿ ಜಮ್ಮು-ಕಾಶ್ಮೀರ ಪೋಲಿಸರು ಜಾಮೀನಿನಲ್ಲಿರುವ ಭಯೋತ್ಪಾದನೆ ಆರೋಪಿಯ ಮೇಲೆ ನಿಗಾಯಿರಿಸಲು ಜಿಪಿಎಸ್ ಟ್ರ್ಯಾಕಿಂಗ್ ಆ್ಯಂಕ್ಲೆಟ್ ಅನ್ನು ಬಳಕೆಗೆ ತಂದಿದ್ದರು.





