ಔಷಧಿ ಶಾಸ್ತ್ರ ಪ್ರಮಾಣಪತ್ರ ಹೊಂದಿರುವ ಹೋಮಿಯೊಪತಿ ವೈದ್ಯರಿಗೆ ಅಲೋಪತಿ ಚಿಕಿತ್ಸೆ ನೀಡಲು ಅವಕಾಶ
ಮಹಾರಾಷ್ಟ್ರ ವೈದ್ಯಕೀಯ ಮಂಡಳಿಯ ವಿವಾದಾತ್ಮಕ ನಿರ್ಧಾರ

ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದಾದ ನಿರ್ಧಾರವೊಂದನ್ನು ಮಹಾರಾಷ್ಟ್ರ ವೈದ್ಯಕೀಯ ಮಂಡಳಿ(ಎಂಎಂಸಿ)ಯು ತೆಗೆದುಕೊಂಡಿದ್ದು, ಔಷಧಿ ಶಾಸ್ತ್ರದಲ್ಲಿ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಮಾಡಿರುವ ಹೋಮಿಯೋಪತಿ ವೈದ್ಯರು ತಮ್ಮ ರೋಗಿಗಳಿಗೆ ಆಧುನಿಕ ಔಷಧಿಗಳನ್ನು ಶಿಫಾರಸು ಮಾಡುವುದು ಶೀಘ್ರವೇ ಸಾಧ್ಯವಾಗಲಿದೆ. ಇದರಲ್ಲಿ ಯಾವ ರೀತಿಯ ಔಷಧಿಗಳು ಮತ್ತು ರೋಗಗಳು ಒಳಗೊಂಡಿರಬಹುದು ಎನ್ನುವುದನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು Times of India ವರದಿ ಮಾಡಿದೆ.
ಈ ಸಂಬಂಧ ಇತ್ತೀಚಿಗೆ ಅಧಿಸೂಚನೆಯನ್ನು ಹೊರಡಿಸಿರುವ ಎಂಎಂಸಿ ಸರ್ಟಿಫಿಕೇಟ್ ಕೋರ್ಸ್ ಇನ್ ಮಾಡರ್ನ್ ಫಾರ್ಮಾಕಾಲಜಿ(ಸಿಸಿಎಂಪಿ)ಯನ್ನು ಪೂರ್ಣಗೊಳಿಸಿರುವ ಹೋಮಿಯೊಪತಿ ವೈದ್ಯರಿಗೆ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಿದೆ. ಎಂಎಂಸಿ 2022ರಿಂದಲೂ ಚುನಾಯಿತ ವೈದ್ಯರ ಮಂಡಳಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ.
‘ನ್ಯಾಯಾಲಯದ ಮುಂದೆ ಬಾಕಿಯಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದಿಂದ ನಿರ್ದೇಶನಗಳು ಹಾಗೂ ಕಾನೂನು ಮತ್ತು ನ್ಯಾಯಾಂಗ ಇಲಾಖೆಯಿಂದ ಅನುಮತಿಯನ್ನು ನಾವು ಸ್ವೀಕರಿಸಿದ್ದೇವೆ. ಜು.15ರಿಂದ ಹೋಮಿಯೊಪತಿ ವೈದ್ಯರ ನೋಂದಣಿಯನ್ನು ನಾವು ಆರಂಭಿಸಲಿದ್ದೇವೆ. ಅಲ್ಲಿಯವರೆಗೆ ಅವರು ಯಾವ ರೀತಿಯ ಔಷಧಿಗಳನ್ನು ಶಿಫಾರಸು ಮಾಡಬಹುದು ಎಂಬ ಬಗ್ಗೆ ನಾವು ಅಧ್ಯಯನ ನಡೆಸುತ್ತೇವೆ’ ಎಂದು ಎಂಎಂಸಿಯ ಆಡಳಿತಾಧಿಕಾರಿ ಡಾ.ವಿಂಕಿ ರುಘ್ವಾನಿ ಸುದ್ದಿಸಂಸ್ಥೆಗೆ ತಿಳಿಸಿದರು.
2014ರಲ್ಲಿ ರಾಜ್ಯ ಸರಕಾರವು ಕೆಲವು ಷರತ್ತುಗಳಡಿ ಆಧುನಿಕ ಔಷಧಿಗಳನ್ನು ಶಿಪಾರಸು ಮಾಡಲು ಹೋಮಿಯೊಪತಿ ವೈದ್ಯರಿಗೆ ಅವಕಾಶ ನೀಡಲು ಮಹಾರಾಷ್ಟ್ರ ಹೋಮಿಯೊಪತಿ ವೈದ್ಯರ ಕಾಯ್ದೆ ಮತ್ತು 1965ರ ಎಂಎಂಸಿ ಕಾಯ್ದೆಗೆ ತಿದ್ದುಪಡಿಗಳನ್ನು ತಂದಿದ್ದು ವಿವಾದಾತ್ಮಕ ನಿರ್ಧಾರಕ್ಕೆ ನಾಂದಿ ಹಾಡಿತ್ತು.
ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು ಈ ತಿದ್ದುಪಡಿಗಳನ್ನು ಪ್ರಶ್ನಿಸಿದ್ದು, ಬಾಂಬೆ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ. ಕಳೆದ ವರ್ಷದಿಂದ ಈ ತಡೆಯಾಜ್ಞೆಯಿಂದ ನುಣುಚಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದವು ಎಂದು Times of India ವರದಿ ಮಾಡಿದೆ.
ಡಿಸೆಂಬರ್ 2024ರಲ್ಲಿ ಆಹಾರ ಮತ್ತು ಔಷಧಿ ಆಡಳಿತ(ಎಫ್ಡಿಎ)ವು ಸಿಸಿಎಂಪಿ ಕೋರ್ಸ್ ಪೂರ್ಣಗೊಳಿಸಿರುವ ನೋಂದಾಯಿತ ಹೋಮಿಯೊಪತಿ ವೈದ್ಯರಿಗೆ ಅಲೊಪಥಿಕ್ ಔಷಧಿಗಳನ್ನು ಮಾರಾಟ ಮಾಡುವಂತೆ ಕೆಮಿಸ್ಟ್ಗಳು ಮತ್ತು ಸಗಟು ಔಷಧಿ ವ್ಯಾಪಾರಿಗಳಿಗೆ ನಿರ್ದೇಶನ ನೀಡಿತ್ತು.
ಎಫ್ಡಿಎ ಔಷಧಿ ನಿಯಂತ್ರಕವಾಗಿದೆ,ಆದರೆ ಯಾರು ವೈದ್ಯಕೀಯ ವೃತ್ತಿಯನ್ನು ನಡೆಸಬಹುದು ಎನ್ನುವುದನ್ನು ನಿರ್ಧರಿಸುವ ಅಧಿಕಾರ ಅದಕ್ಕಿಲ್ಲ. ಆ ಅಧಿಕಾರವು ಎಂಎಂಸಿಗೆ ಮಾತ್ರ ಇದೆ ಎಂದು ಐಎಂಎ ಮಹಾರಾಷ್ಟ್ರ ಅಧ್ಯಕ್ಷ ಡಾ.ಸಂತೋಷ ಕದಂ ಹೇಳಿದರು. ಎಂಎಂಸಿಯ ಸುತ್ತೋಲೆಯು ಈವರೆಗೆ ಹಲ್ಲಿಲ್ಲದಿದ್ದ ನಿರ್ದೇಶನಕ್ಕೆ ಕಾನೂನು ಬಲವನ್ನು ನೀಡಿದೆ ಎಂದರು.
ಹೋಮಿಯೊಪತಿ ವೈದ್ಯರಿಗೆ ಅಲೋಪತಿ ಔಷಧಿಗಳನ್ನು ನೀಡಲು ಅವಕಾಶ ಕಲ್ಪಿಸಿ ಆದೇಶವನ್ನು ಹೊರಡಿಸುವಂತೆ ಎಫ್ಡಿಎ ಮತ್ತು ಎಂಎಂಸಿ ಎರಡರ ಮೇಲೂ ಒತ್ತಡ ಹೇರಲಾಗಿತ್ತು. ಹೆಚ್ಚಿನ ಹೋಮಿಯೊಪತಿ ಕಾಲೇಜುಗಳು ರಾಜ್ಯದ ರಾಜಕಾರಣಿಗಳ ನೇರ ಒಡೆತನದಲ್ಲಿವೆ ಅಥವಾ ಅವರೊಂದಿಗೆ ಪರೋಕ್ಷ ಸಂಬಂಧವನ್ನು ಹೊಂದಿವೆ ಎಂದು ಡಾ.ಕದಂ ಹೇಳಿದರು.







