ಕನ್ವರ್ ಯಾತ್ರೆ ದಾರಿಯ ಹೊಟೇಲ್ಗಳು ಮಾಲೀಕರ ಹೆಸರುಗಳನ್ನು ಪ್ರದರ್ಶಿಸಬೇಕು | ಉತ್ತರಪ್ರದೇಶ ಪೊಲೀಸರ ಆದೇಶ

PC : PTI
ಲಕ್ನೋ : ಕನ್ವರ್ ಯಾತ್ರೆ ಸಾಗುವ 240 ಕಿ.ಮೀ. ದಾರಿಯುದ್ದಕ್ಕೂ ಇರುವ ರಸ್ತೆ ಬದಿಯ ಆಹಾರ ಮಾರಾಟದ ಗಾಡಿಗಳು ಸೇರಿದಂತೆ ಹೊಟೇಲ್ಗಳು ತಮ್ಮ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಹೆಸರುಗಳ ಪಟ್ಟಿಯನ್ನು ಪ್ರದರ್ಶಿಸಬೇಕು ಎಂಬ ಆದೇಶವನ್ನು ಮುಝಫ್ಫರ್ನಗರ ಪೊಲೀಸರು ಬುಧವಾರ ನೀಡಿದ್ದಾರೆ.
‘‘ಕನ್ವಾರಿಗಳು (ಕನ್ವರ್ ಯಾತ್ರೆಯಲ್ಲಿ ಸಾಗುವವರು) ರಸ್ತೆ ಬದಿಯ ತಿಂಡಿ ಅಂಗಡಿಗಳಿಂದ ಆಹಾರ ಖರೀದಿಸುತ್ತಾರೆ. ಅವರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎನ್ನುವ ದೃಷ್ಟಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ. ಮುಂದೆ ಯಾವುದೇ ಆರೋಪಗಳು ಮತ್ತು ಪ್ರತ್ಯಾರೋಪಗಳು ಬಾರದಂತೆ ಹಾಗೂ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಗೆ ಧಕ್ಕೆಯಾಗದಂತೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ’’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮುಝಪ್ಫರ್ನಗರ ಶಾಸಕ ಹಾಗೂ ಸಚಿವ ಕಪಿಲ್ ದೇವ್ ಅಗರ್ವಾಲ್ ಒಂದು ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು. ‘‘ಯಾತ್ರೆ ಸಾಗುವ ದಾರಿಯಲ್ಲಿ ಮುಸ್ಲಿಮರು ವ್ಯಾಪಾರ ಮಾಡುವುದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲವಾದರೂ, ಘರ್ಷಣೆ ತಪ್ಪಿಸುವುದಕ್ಕಾಗಿ ಅವರು ತಮ್ಮ ಅಂಗಡಿಗಳಿಗೆ ಹಿಂದೂ ದೇವರ ಅಥವಾ ದೇವತೆಗಳ ಹೆಸರುಗಳನ್ನು ಇಡಬಾರದು’’ ಎಂದು ಅವರು ಹೇಳಿದ್ದರು.
ಉತ್ತರಪ್ರದೇಶ ಪೊಲೀಸರ ಆದೇಶವು ದೊಡ್ಡ ವಿವಾದವೊಂದನ್ನು ಸೃಷ್ಟಿಸಿದೆ. ಈ ಆದೇಶವು ನಿರ್ದಿಷ್ಟ ಸಮುದಾಯವೊಂದನ್ನು ಗುರಿ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಪೊಲೀಸರು, ಆದೇಶದ ಉದ್ದೇಶವು ಯಾವುದೇ ರೀತಿಯ ಧಾರ್ಮಿಕ ತಾರತಮ್ಯವನ್ನು ಸೃಷ್ಟಿಸುವುದಲ್ಲ, ಭಕ್ತರಿಗೆ ಸೌಲಭ್ಯ ಕಲ್ಪಿಸುವುದಷ್ಟೇ ಆಗಿದೆ ಎಂದು ಹೇಳಿದ್ದಾರೆ.
‘‘ಶ್ರಾವಣ ಕನ್ವರ್ ಯಾತ್ರೆಯ ಸಮಯದಲ್ಲಿ, ನೆರೆಯ ರಾಜ್ಯಗಳ ಕನ್ವಾರಿಯರು ಪಶ್ಚಿಮ ಉತ್ತರಪ್ರದೇಶದ ಮೂಲಕ ಬಂದು ಹರಿದ್ವಾರದಿಂದ ತೀರ್ಥ ಪಡೆದು ಮುಝಫ್ಫರ್ನಗರ ಜಿಲ್ಲೆಯ ಮೂಲಕ ಹಾದು ಹೋಗುತ್ತಾರೆ. ಪವಿತ್ರ ಶ್ರಾವಣ ತಿಂಗಳಲ್ಲಿ ಹೆಚ್ಚಿನ ಜನರು, ವಿಶೇಷವಾಗಿ ಕನ್ವಾರಿಯರು ತಮ್ಮ ಆಹಾರದಿಂದ ಕೆಲವು ಪದಾರ್ಥಗಳನ್ನು ತ್ಯಜಿಸುತ್ತಾರೆ. ಹಿಂದೆ, ಕೆಲವು ಘಟನೆಗಳು ನಡೆದಿವೆ. ಕನ್ವರ್ ಮಾರ್ಗದಲ್ಲಿ ಎಲ್ಲಾ ಆಹಾರಗಳನ್ನು ಮಾರಾಟ ಮಾಡುವ ಕೆಲವು ಅಂಗಡಿಗಳ ಮಾಲೀಕರು, ಕನ್ವಾರಿಯರಲ್ಲಿ ಗೊಂದಲ ಹುಟ್ಟಿಸುವಂಥ ಹೆಸರುಗಳನ್ನು ತಮ್ಮ ಅಂಗಡಿಗಳಿಗೆ ಇಟ್ಟಿದ್ದರು. ಅದು ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಗೂ ಕಾರಣವಾಗಿತ್ತು’’ ಎಂದು ಮುಝಫ್ಫರ್ನಗರ ಪೊಲೀಸರು ಹೇಳಿದ್ದಾರೆ.
ಉತ್ತರಪ್ರದೇಶ ಪೊಲೀಸರ ಈ ಆದೇಶವು ವರ್ಣಭೇದ ನೀತಿ ಹಾಗೂ ನಾಝಿ ಜರ್ಮನಿಯ ಯಹೂದಿ ಉದ್ಯಮಗಳ ಬಹಿಷ್ಕಾರಕ್ಕೆ ಸಮವಾಗಿದೆ ಎಂದು ಎಐಎಮ್ಐಎಮ್ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಬಣ್ಣಿಸಿದ್ದಾರೆ.
ಇದು ‘‘ಸರಕಾರಿ ಪ್ರಾಯೋಜಿತ ಅಸಹಿಷ್ಣುತೆಯಾಗಿದೆ’’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರ ಹೇಳಿದ್ದಾರೆ.
ವಾರ್ಷಿಕ ಕನ್ವರ್ ಯಾತ್ರೆಯು ಈ ವರ್ಷ ಜುಲೈ 22ರಿಂದ ಆಗಸ್ಟ್ 2ರವರೆಗೆ ನಡೆಯಲಿದೆ.
ಸಾಮಾಜಿಕ ಅಪರಾಧ: ಅಖಿಲೇಶ್
ಮಾಲೀಕರು ಮತ್ತು ಸಿಬ್ಬಂದಿಯ ಹೆಸರುಗಳನ್ನು ಪ್ರದರ್ಶಿಸಬೇಕೆಂದು ಕನ್ವಾರಿಯ ಯಾತ್ರೆಯ ಉದ್ದಕ್ಕೂ ಇರುವ ಆಹಾರ ಪದಾರ್ಥಗಳನ್ನು ಮಾರುವ ಹೊಟೇಲ್ಗಳಿಗೆ ಉತ್ತರಪ್ರದೇಶ ಪೊಲೀಸರು ನೀಡಿರುವ ಆದೇಶವು ‘‘ಸಾಮಾಜಿಕ ಅಪರಾಧ’’ವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಬಣ್ಣಿಸಿದ್ದಾರೆ. ಜನರ ನಡುವಿನ ಸಾಮರಸ್ಯವನ್ನು ಕೆಡಿಸಲು ಇಂಥ ಆದೇಶಗಳನ್ನು ತರಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
‘‘ಗೌರವಾನ್ವಿತ ನ್ಯಾಯಾಲಯಗಳು ಇದನ್ನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಳ್ಳಬೇಕು ಮತ್ತು ಇಂಥ ಆದೇಶಗಳ ಹಿಂದೆ ಇರುವ ಸರಕಾರದ ಉದ್ದೇಶಗಳ ಬಗ್ಗೆ ತನಿಖೆ ನಡೆಸಬೇಕು. ಇಂಥ ಆದೇಶಗಳು ಸಾಮಾಜಿಕ ಅಪರಾಧಗಳಾಗಿವೆ. ಅವುಗಳು ಸಮಾಜದ ಸಾಮರಸ್ಯವನ್ನು ಕೆಡಿಸಲು ಬಯಸುತ್ತವೆ. ಗುಡ್ಡು, ಮುನ್ನ, ಛೋಟು ಅಥವಾ ಫಟ್ಟೆ ಎಂಬ ಹೆಸರುಗಳಿಂದ ಏನು ಗೊತ್ತಾಗುತ್ತದೆ?’’ ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
ಇದು ನಾಝಿಗಳ ನೀತಿ: ಜಾವೇದ್ ಅಖ್ತರ್
ಕನ್ವರ್ ಯಾತ್ರೆಯ ದಾರಿಯುದ್ದಕ್ಕೂ ಇರುವ ಹೊಟೇಲ್ಗಳು ತಮ್ಮ ಮಾಲೀಕರು ಮತ್ತು ಸಿಬ್ಬಂದಿಯ ಹೆಸರುಗಳನ್ನು ಪ್ರದರ್ಶಿಸಬೇಕು ಎಂಬುದಾಗಿ ಉತ್ತರಪ್ರದೇಶ ಪೊಲೀಸರು ನೀಡಿರುವ ಆದೇಶವನ್ನು ಖ್ಯಾತ ಚಿತ್ರಕತೆ ಲೇಖಕ ಹಾಗೂ ಹಾಡು ರಚನೆಕಾರ ಜಾವೇದ್ ಅಖ್ತರ್ ಗುರುವಾರ ಖಂಡಿಸಿದ್ದಾರೆ.
‘‘ನಿರ್ದಿಷ್ಟ ಧಾರ್ಮಿಕ ಮೆರವಣಿಗೆಯೊಂದು ಸಾಗುವ ದಾರಿಯಲ್ಲಿ ಇರುವ ಎಲ್ಲಾ ಅಂಗಡಿಗಳು, ಹೊಟೇಲ್ಗಳು ಮತ್ತು ವಾಹನಗಳು ಕೂಡ ತಮ್ಮ ಮಾಲೀಕರ ಹೆಸರುಗಳನ್ನು ಎದ್ದುಕಾಣುವಂತೆ ಮತ್ತು ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂಬುದಾಗಿ ಉತ್ತರಪ್ರದೇಶದ ಮುಝಫ್ಫರ್ನಗರ ಪೊಲೀಸರು ಆದೇಶ ನೀಡಿದ್ದಾರೆ. ಯಾಕೆ? ನಾಝಿ ಕಾಲದ ಜರ್ಮನಿಯಲ್ಲೂ, ಅವರು ನಿರ್ದಿಷ್ಟ ಅಂಗಡಿಗಳು ಮತ್ತು ಮನೆಗಳ ಮೇಲೆ ಗುರುತುಗಳನ್ನು ಮಾಡುತ್ತಿದ್ದರು’’ ಎಂದು ಜಾವೇದ್ ಅಖ್ತರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ.







