‘ಕಾಯಂ’ ಹೆದ್ದಾರಿ ಶುಲ್ಕಗಳನ್ನು ಪ್ರಶ್ನಿಸಿದ ಸದನ ಸಮಿತಿ; ವೆಚ್ಚ ವಸೂಲಾದ ಬಳಿಕ ರದ್ದುಗೊಳಿಸುವಂತೆ ಶಿಫಾರಸು

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಯಂ ಆಗಿ ಮುಂದುವರಿದಿರುವ ಶುಲ್ಕಗಳನ್ನು ಬಂಡವಾಳ ಮತ್ತು ನಿರ್ವಹಣಾ ವೆಚ್ಚಗಳು ಮರು ವಸೂಲಾದ ಬಳಿಕ ಕಡಿಮೆ ಮಾಡಬೇಕು ಅಥವಾ ರದ್ದುಗೊಳಿಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಯು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ. ನ್ಯಾಯಪರತೆಯನ್ನು ಖಚಿತಪಡಿಸಿಕೊಳ್ಳಲು ಶುಲ್ಕ ನಿರ್ಧಾರಕ್ಕಾಗಿ ಸುಂಕ ಪ್ರಾಧಿಕಾರದ ರಚನೆಯನ್ನೂ ಅದು ಪ್ರಸ್ತಾವಿಸಿದೆ ಎಂದು thehindu.com ವರದಿ ಮಾಡಿದೆ.
ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಅಧ್ಯಕ್ಷರಾಗಿರುವ ಪಿಎಸಿ, ಹೆದ್ದಾರಿಗಳಲ್ಲಿ ದುರಸ್ತಿ ನಡೆಯುತ್ತಿರುವಾಗ ಅಥವಾ ಅನರ್ಹವಾಗಿರುವಾಗ ಸ್ವಯಂಚಾಲಿತ ಶುಲ್ಕ ಮರುಪಾವತಿ ಅಥವಾ ಮನ್ನಾಕ್ಕಾಗಿ ತಂತ್ರಜ್ಞಾನ-ಚಾಲಿತ ಮತ್ತು ಪಾರದರ್ಶಕ ಕಾರ್ಯವಿಧಾನವನ್ನು ಪ್ರಸ್ತಾವಿಸಿದೆ. ಇದನ್ನು ಎಲೆಕ್ಟ್ರಾನಿಕ್ ಫಾಸ್ಟ್ಯಾಗ್ ವ್ಯವಸ್ಥೆಯೊಂದಿಗೆ ಏಕೀಕರಿಸಬೇಕು ಎಂದೂ ಅದು ಹೇಳಿದೆ.
ಯಾವುದೇ ಹೆದ್ದಾರಿ ವಿಭಾಗದಲ್ಲಿ ಬಂಡವಾಳ ಮತ್ತು ನಿಯಮಿತ ನಿರ್ವಹಣಾ ವೆಚ್ಚಗಳು ವಸೂಲಾದ ಬಳಿಕ ಶುಲ್ಕ ಸಂಗ್ರಹವನ್ನು ತರ್ಕಬದ್ಧಗೊಳಿಸಬೇಕು ಮತ್ತು ಗಣನೀಯವಾಗಿ ತಗ್ಗಿಸಬೇಕು. ಈ ಹಂತವನ್ನು ಮೀರಿ ಯಾವುದೇ ಶುಲ್ಕಗಳ ಮುಂದುವರಿಕೆಯನ್ನು ಪ್ರಸ್ತಾವಿತ ಸ್ವತಂತ್ರ ಮೇಲ್ವಿಚಾರಣಾ ಪ್ರಾಧಿಕಾರವು ಸ್ಪಷ್ಟವಾಗಿ ಅನುಮೋದಿಸಿದರೆ ಮಾತ್ರ ಅನುಮತಿಸಬೇಕು ಎಂದು ಶಿಫಾರಸು ಮಾಡಿರುವ ವರದಿಯು, ಇಂತಹ ಕಾರ್ಯವಿಧಾನವು ಬಳಕೆದಾರರ ಹಿತಾಸಕ್ತಿಯನ್ನು ಕಾಯುತ್ತದೆ ಮತ್ತು ಸಾರ್ವಜನಿಕ ಮೂಲಸೌಕರ್ಯ ಬಳಕೆಯಲ್ಲಿ ಸಮಾನತೆಯ ತತ್ವವನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕಗಳು ವಾರ್ಷಿಕ ಶೇ.3ರಷ್ಟು ಹೆಚ್ಚಳದೊಂದಿಗೆ 2008ರಲ್ಲಿ ನಿಗದಿ ಪಡಿಸಲಾಗಿದ್ದ ದರಗಳನ್ನು ಆಧರಿಸಿವೆ. ಯೋಜನಾ ವೆಚ್ಚ ವಸೂಲಾದ ಬಳಿಕವೂ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಿದ 2008ರ ತಿದ್ದುಪಡಿಯೊಂದಿಗೆ ಕಾಯಂ ಶುಲ್ಕದ ಪರಿಕಲ್ಪನೆ ಆರಂಭಗೊಂಡಿತ್ತು. 2023ರ ಶುಲ್ಕ ನಿಯಮಗಳ ತಿದ್ದುಪಡಿಯಲ್ಲಿ ಇದನ್ನು ಇನ್ನಷ್ಟು ಔಪಚಾರಿಕಗೊಳಿಸಲಾಗಿದ್ದು, ಇದು ರಿಯಾಯಿತಿ ಅವಧಿಯನ್ನು ಮೀರಿ ಶುಲ್ಕ ಸಂಗ್ರಹವನ್ನು ಸ್ಪಷ್ಟವಾಗಿ ಅನುಮತಿಸಿದೆ.
‘ಬಿಲ್ಡ್ ಆಪರೇಟ್ ಟೋಲ್’ ಯೋಜನೆಯ ರಿಯಾಯಿತಿ ಮುಗಿದ ಬಳಿಕ ಆಸ್ತಿಯು ಭಾರತಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ)ಕ್ಕೆ ವರ್ಗಾವಣೆಗೊಳ್ಳುತ್ತದೆ ಮತ್ತು ಸಾರ್ವಜನಿಕ ಆರ್ಥಿಕ ನೆರವಿನ ಟೋಲ್ ಪ್ಲಾಝಾ ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಆದಾಯವು ಭಾರತದ ಸಂಚಿತ ನಿಧಿಗೆ ಜಮೆಯಾಗುತ್ತದೆ.
ಸಗಟು ಬೆಲೆ ಸೂಚ್ಯಂಕದ ಭಾಗಶಃ ಹೊಂದಾಣಿಕೆಯೊಂದಿಗೆ ಸಂಯೋಜಿತ ಸ್ಥಿರ ಏರಿಕೆಯನ್ನು ಬಳಸಿಕೊಂಡು ಶುಲ್ಕ ದರಗಳನ್ನು ವಾರ್ಷಿಕವಾಗಿ ಪರಿಷ್ಕರಿಸಲಾಗುತ್ತಿದ್ದರೂ, ಟೋಲ್ ಶುಲ್ಕಗಳು ನಿಜವಾದ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳು ಅಥವಾ ಭವಿಷ್ಯದ ಸೇವಾ ಅಗತ್ಯಗಳನ್ನು ಪ್ರತಿಬಿಂಬಿಸುತ್ತವೆಯೇ ಎನ್ನುವುದನ್ನು ನಿರ್ಣಯಿಸಲು ಯಾವುದೇ ಕಾರ್ಯವಿಧಾನವಿಲ್ಲ ಎನ್ನುವುದನ್ನು ಸಮಿತಿಯು ಗಮನಿಸಿದೆ.
ನಾಗರಿಕ ವಾಯುಯಾನ ಕ್ಷೇತ್ರದಲ್ಲಿ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರದ ಮಾದರಿಯಲ್ಲಿ ಸುಂಕ ಪ್ರಾಧಿಕಾರವನ್ನು ಸ್ಥಾಪಿಸುವಂತೆ ಪಿಎಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪ್ರಸ್ತಾವಿಸಿದೆ.







