12ನೇ ಶತಮಾನದ ಸಮಾಧಿ ಅತಿಕ್ರಮಣ ಹೇಗಾಗುತ್ತದೆ?: ಇತಿಹಾಸಕಾರರ ಪ್ರಶ್ನೆ
ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಧ್ವಂಸ ಕಾರ್ಯಾಚರಣೆ

Photo: hindustantimes.com
ಹೊಸದಿಲ್ಲಿ : ತಲೆಮಾರುಗಳಿಂದಲೂ ಮುಸ್ಲಿಮರು ಮತ್ತು ಹಿಂದುಗಳು ಆರಾಧಿಸಿಕೊಂಡು ಬಂದಿದ್ದ, ದಿಲ್ಲಿಯ ಅತ್ಯಂತ ಹಳೆಯ ಸೂಫಿ ಸಂತರಲ್ಲೋರ್ವರು ಎಂದು ನಂಬಲಾಗಿರುವ ಬಾಬಾ ಹಾಜಿ ರೋಜ್ಬಿ ಅವರ ಸಮಾಧಿಯನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ವು ನೆಲಸಮಗೊಳಿಸಿದೆ. ಮೆಹ್ರೌಲಿಯಲ್ಲಿಯ ಅರಣ್ಯ ಪ್ರದೇಶ ಸಂಜಯ ವನದ ತೀರ ಒಳಗೆ ಕಿಲಾ ಲಾಲ್ ಕೋಟ್ ಬಳಿಯಿದ್ದ ಈ 12ನೇ ಶತಮಾನದ ಸಮಾಧಿಯು ಹೇಗೆ ಅತಿಕ್ರಮಣವಾಗುತ್ತದೆ ಎಂದು ಇತಿಹಾಸ ತಜ್ಞರು ಪ್ರಶ್ನಿಸಿದ್ದಾರೆ.
ದಿಲ್ಲಿಯಲ್ಲಿ ವಾಣಿಜ್ಯ ಭೂಮಿಯನ್ನು ಅಭಿವೃದ್ಧಿಗೊಳಿಸುವ ಡಿಡಿಎ 780 ಎಕರೆ ವಿಸ್ತೀರ್ಣದ ಸಂಜಯ ವನ ಪ್ರದೇಶದಲ್ಲಿಯ ‘ಅತಿಕ್ರಮಣಗಳನ್ನು’ ತೆರವುಗೊಳಿಸುವ ಅಭಿಯಾನದ ಅಂಗವಾಗಿ ಜ.30ರಂದು ನೆಲಸಮಗೊಳಿಸಿದ ಹಲವಾರು ಧಾರ್ಮಿಕ ರಚನೆಗಳಲ್ಲಿ ಸುಮಾರು 1,000 ವರ್ಷಗಳಷ್ಟು ಹಳೆಯದಾದ ಈ ಸಮಾಧಿಯೂ ಸೇರಿದೆ.
ಬಾಬಾ ಹಾಜಿ ರೋಜ್ಬಿ ಅವರ ಸಮಾಧಿಯು ಸಾವಿರ ವರ್ಷಗಳಿಂದಲೂ ಇಲ್ಲಿತ್ತು. ಡಿಡಿಎ ಕೇವಲ ನೂರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಸಮಾಧಿ ಈಗ ಅತಿಕ್ರಮಣ ಆಗಿದ್ದು ಹೇಗೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದಿಲ್ಲಿಯ ಇತಿಹಾಸತಜ್ಞ ಹಾಗೂ ಲೇಖಕ ರಾಣಾ ಸಫ್ವಿ ಪ್ರಶ್ನಿಸಿದರು.
ಸಫ್ವಿ ಪ್ರಕಾರ ಬಾಬಾ ಹಾಜಿ ರೋಜ್ಬಿಯವರು ರಜಪೂತ ದೊರೆ ಪೃಥ್ವಿರಾಜ ಚೌಹಾಣ ಆಳ್ವಿಕೆಯಲ್ಲಿ ದಿಲ್ಲಿಯನ್ನು ಪ್ರವೇಶಿಸಿದ್ದ ಮೊದಲ ಸೂಫಿ ಸಂತರಲ್ಲೋರ್ವರಾಗಿದ್ದರು. ಅವರ ಗೋರಿಯು ಕಿಲಾ ರಾಯ್ ಪಿಥೌಡಾದ ಫತೇ ಬುರ್ಜ್ ಬಳಿಯಲ್ಲಿತ್ತು. ಮುಕ್ತ ಬಯಲಿನಲ್ಲಿದ್ದ ಅದು ಸುಣ್ಣ ಬಳಿಯಲಾಗಿದ್ದ ಸರಳ ರಚನೆಯಾಗಿತ್ತು. ಹಾಜಿ ರೋಜ್ಬಿ ಅವರು ಕೋಟೆಯ ಕಂದಕದ ಬಳಿ ಗುಹೆಯೊಂದರಲ್ಲಿ ವಾಸವಾಗಿದ್ದರು ಎಂದು ನಂಬಲಾಗಿದೆ. ಅವರ ಬೋಧನೆಗಳು ಮತ್ತು ವಿನಮ್ರತೆ ಹಲವು ಶಿಷ್ಯರನ್ನು ಅವರತ್ತ ಆಕರ್ಷಿಸಿದ್ದವು.
ಸಫ್ವಿ ಹೇಳುವಂತೆ ಹಾಜಿ ರೋಜ್ಬಿ ದಿಲ್ಲಿಗೆ ಆಗಮಿಸಿದ್ದ ನಿಖರವಾದ ವರ್ಷದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ ಪ್ರದೇಶದಲ್ಲಿಯ ಹಿಂದುಗಳು ಮತ್ತು ಮುಸ್ಲಿಮರು ತಲೆಮಾರುಗಳಿಂದಲೂ ಅವರ ಗೋರಿಯನ್ನು ಆರಾಧಿಸುತ್ತಿದ್ದರು.
ಸಂಜಯ ವನ ಮೀಸಲು ಅರಣ್ಯವಾಗಿದ್ದು,ತೆರವು ಕಾರ್ಯಾಚರಣೆಗಳ ಮೂಲಕ 5,000 ಚ.ಮೀ.ಗೂ ಅಧಿಕ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಡಿಎ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಸಹಾಯಕ ಅಧೀಕ್ಷಕರಾಗಿದ್ದ ಮೌಲ್ವಿ ಝಾಫರ್ ಹಸನ್ ಅವರು 1922ರಲ್ಲಿ ಪ್ರಕಟಿಸಿದ್ದ ‘ಮುಹಮ್ಮದನ್ ಮತ್ತು ಹಿಂದು ಸ್ಮಾರಕಗಳು,ಸಂಪುಟ 3’ರಲ್ಲಿ ಹಾಜಿ ರೋಜ್ಬಿಯವರ ಗೋರಿಯನ್ನು ಉಲ್ಲೇಖಿಸಲಾಗಿದೆ.
ಸಂಜಯ ವನದಲ್ಲಿದ್ದ ಅಖೊಂಡ್ಜಿ ಮಸೀದಿ,ಪಕ್ಕದಲ್ಲಿಯ ಮದರಸ ಬಹ್ರುಲ್ ಉಲೂಮ್ ಮತ್ತು ದಶಕಗಳಷ್ಟು ಹಳೆಯದಾಗಿದ್ದ ಖಬರಸ್ತಾನ್ ಡಿಡಿಎ ಧ್ವಂಸಗೊಳಿಸಿರುವ ರಚನೆಗಳಲ್ಲಿ ಸೇರಿವೆ.
ಸಂಜಯ ವನದಲ್ಲಿಯ ಧಾರ್ಮಿಕ ರಚನೆಗಳನ್ನು ಅತಿಕ್ರಮಣ ಎಂದು ಕರೆಯುವುದು ತಪ್ಪಾಗುತ್ತದೆ ಎಂದು ಹೇಳಿದ ಸಫ್ವಿ, ಸಂಜಯ ವನವನ್ನು 1994ರಲ್ಲಷ್ಟೇ ಮೀಸಲು ಅರಣ್ಯ ಎಂದು ಅಧಿಸೂಚಿಸಲಾಗಿತ್ತು. ಹೀಗಾಗಿ ಹಳೆಯ ಮಸೀದಿ ಅತಿಕ್ರಮಣವಾಗುತ್ತದೆಯೇ? ಎಂದು ಪ್ರಶ್ನಿಸಿದರು.
ಧಾರ್ಮಿಕ ಸ್ಥಳಗಳನ್ನು ನೆಲಸಮಗೊಳಿಸಿರುವುದು ದಿಲ್ಲಿಯ ಪರಂಪರೆಗೆ ಅಗಾಧ ನಷ್ಟವಾಗಿದೆ ಎಂದು ಹೇಳಿದ ಇತಿಹಾಸತಜ್ಞ ಹಾಗೂ ಲೇಖಕ ಸ್ಯಾಮ್ ಡಾಲಿಂಪಲ್ ಅವರು, ಸಂಜಯ ವನ ದಿಲ್ಲಿಯ ಆರಂಭಿಕ ಪರಂಪರೆಗಳಿಂದ ತುಂಬಿದೆ. ಧ್ವಂಸಗೊಳಿಸಲಾದ ಹೆಚ್ಚಿನ ಗೋರಿಗಳು ದಿಲ್ಲಿಯನ್ನು ಜಯಿಸಿದ್ದ ಘುರಿಡ್ ಸೈನಿಕರದ್ದಾಗಿದ್ದವು. ಅಲ್ಲಿಯ ಕೆಲವು ಧಾರ್ಮಿಕ ರಚನೆಗಳು ಉಪಖಂಡದಲ್ಲಿಯೇ ಅತ್ಯಂತ ಹಳೆಯದಾಗಿವೆ ಎಂದು ತಿಳಿಸಿದರು.







