ಮಹಾರಾಷ್ಟ್ರ | ಕನಿಷ್ಠ ಸುಳಿವಿದ್ದ ಅಪಘಾತ ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ನೆರವು ನೀಡಿದ AI ತಂತ್ರಜ್ಞಾನದ ಚಮತ್ಕಾರ!

PC : NDTV
ನಾಗ್ಪುರ: ಇತ್ತೀಚೆಗೆ ಬೈಕ್ ಸವಾರರೊಬ್ಬರು ಟ್ರಕ್ ಅಪಘಾತದಲ್ಲಿ ಮೃತಪಟ್ಟಿದ್ದ ತಮ್ಮ ಪತ್ನಿಯ ಶವವನ್ನು ತಮ್ಮ ಬೈಕ್ ನ ಹಿಂದೆ ಕಟ್ಟಿಕೊಂಡು ಸಾಗಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೊ ವೈರಲ್ ಆದ ಕೇವಲ 36 ಗಂಟೆಗಳಲ್ಲಿ ಅಪಘಾತವೆಸಗಿದ ಆರೋಪಿಯನ್ನು ಬಂಧಿಸುವಲ್ಲಿ ನಾಗ್ಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಅದಕ್ಕೆ ಕಾರಣ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ!
ಆಗಸ್ಟ್ 9, ರಕ್ಷಾ ಬಂಧನದ ದಿನದಂದು ಬೈಕ್ ನಲ್ಲಿ ಹೋಗುತ್ತಿದ್ದ ದಂಪತಿಗಳಿಗೆ ವೇಗವಾಗಿ ಬಂದ ಟ್ರಕ್ ಒಂದು ಡಿಕ್ಕಿ ಹೊಡೆದಿತ್ತು. ಇದರಿಂದ ಆಯ ತಪ್ಪಿ ಕೆಳಗೆ ಬಿದ್ದ ಬೈಕ್ ಸವಾರನ ಪತ್ನಿಯ ಮೇಲೆ ಟ್ರಕ್ ಹರಿದು, ಅಲ್ಲಿಂದ ಪರಾರಿಯಾಗಿತ್ತು. ಈ ಅಪಘಾತದಲ್ಲಿ ಮೃತಪಟ್ಟ ತನ್ನ ಪತ್ನಿಯ ಶವವನ್ನು ತನ್ನ ಬೈಕ್ ಹಿಂದೆ ಕಟ್ಟಿಕೊಂಡು ಆ ಬೈಕ್ ಸವಾರ ಮಧ್ಯಪ್ರದೇಶದಲ್ಲಿರುವ ತನ್ನ ಗ್ರಾಮಕ್ಕೆ ಹೊತ್ತೊಯ್ದಿದ್ದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ವ್ಯಾಪಕ ಪ್ರತಿಕ್ರಿಯೆಗಳು ಹರಿದು ಬಂದಿದ್ದವು.
ಈ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ ಬೈಕ್ ಸವಾರ, ಟ್ರಕ್ ಮೇಲೆ ಕೆಂಪು ಗುರುತಿತ್ತು ಎಂಬುದನ್ನು ಮಾತ್ರ ತಿಳಿಸಿದ್ದರು. ಆದರೆ, ಆ ಟ್ರಕ್ ನ ಗಾತ್ರ ಅಥವಾ ಆ ಟ್ರಕ್ ಅನ್ನು ತಯಾರಿಸಿದ ಸಂಸ್ಥೆಯ ಹೆಸರನ್ನಾಗಲಿ ಹೇಳುವಲ್ಲಿ ಆತ ವಿಫಲರಾಗಿದ್ದರು. ಇದಾದ ಕೇವಲ 36 ಗಂಟೆಗಳಲ್ಲಿ ಅಪಘಾತವೆಸಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅದಕ್ಕೆ ದೊಡ್ಡ ನೆರವು ನೀಡಿರುವುದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ.
ಈ ಕುರಿತು NDTV ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ನಾಗ್ಪುರ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹರ್ಷ್ ಪೊಡ್ಡಾರ್, “ಸಂತ್ರಸ್ತ ವ್ಯಕ್ತಿ ಕೇವಲ ಕನಿಷ್ಠ ಪ್ರಮಾಣದ ಮಾಹಿತಿ ಒದಗಿಸಿದ್ದ” ಎಂದು ಹೇಳಿದ್ದಾರೆ.
ಈ ಅಲ್ಪ ಪ್ರಮಾಣದ ಮಾಹಿತಿಯನ್ನು ಆಧರಿಸಿ, ಪೊಲೀಸರು ಆರೋಪಿಯನ್ನು ಹೇಗೆ ಪತ್ತೆ ಹಚ್ಚಿದರು ಎಂದು ಅವರನ್ನು ಪ್ರಶ್ನಿಸಿದಾಗ, ನಾವು ಸಿಸಿಟಿವಿ ದತ್ತಾಂಶಗಳನ್ನು ಸಂಗ್ರಹಿಸಿ, ಅದನ್ನು ಕೃತಕ ಬುದ್ಧಿಮತ್ತೆಯ ಅಲ್ಗಾರಿದಮ್ಸ್ ವಿಶ್ಲೇಷಣೆಗೆ ಒಳಪಡಿಸಿದೆವು ಎಂದು ಅವರು ತಿಳಿಸಿದ್ದಾರೆ.
“ನಾವೇನು ಮಾಡಿದೆವೆಂದರೆ, ಮೆಟಾ ಡೇಟಾ ಎಂದು ಕರೆಯಲಾಗುವ ಸಿಸಿಟಿವಿ ದೃಶ್ಯಾವಳಿಗಳನ್ನು 15-20 ಕಿಮೀ ಅಂತರದಲ್ಲಿರುವ ಮೂರು ಪ್ರತ್ಯೇಕ ಟೋಲ್ ಗಳಿಂದ ಸಂಗ್ರಹಿಸಿದೆವು. ಅದನ್ನು ಎರಡು ಕೃತಕ ಬುದ್ಧಿಮತ್ತೆ ಅಲ್ಗಾರಿದಮ್ ಗಳನ್ನು ಬಳಸಿ ವಿಶ್ಲೇಷಣೆ ಮಾಡಿದೆವು. ಈ ಎರಡೂ ಅಲ್ಗಾರಿದಮ್ ಗಳು ಕಂಪ್ಯೂಟರ್ ವಿಶ್ಯುಯಲ್ ಎಂದು ತಂತ್ರಜ್ಞಾನವನ್ನು ಆಧರಿಸಿದ್ದವು” ಎಂದು ಪೊಡ್ಡಾರ್ ಹೇಳಿದ್ದಾರೆ.
“ಮೊದಲ ಅಲ್ಗಾರಿದಮ್ ಇಡೀ ಸಿಸಿಟಿವಿ ದೃಶ್ಯಾವವಳಿಯನ್ನು ವಿಶ್ಲೇಷಣೆಗೊಳಪಡಿಸಿ, ಕೆಂಪು ಗುರುತು ಹೊಂದಿರುವ ಟ್ರಕ್ ಗಳನ್ನು ಗುರುತು ಹಿಡಿಯುವ ಕೆಲಸ ಮಾಡಿತು. ಎರಡನೆ ಅಲ್ಗಾರಿದಮ್ ಈ ಎಲ್ಲ ಟ್ರಕ್ ಗಳ ಸರಾಸರಿ ವೇಗವನ್ನು ವಿಶ್ಲೇಷಿಸಿ, ಯಾವ ಟ್ರಕ್ ಈ ಅಪಘಾತದಲ್ಲಿ ಭಾಗಿಯಾಗಿರಬಹುದು ಎಂಬ ಅಂದಾಜನ್ನು ನಮಗೆ ನೀಡಿತು. ಇದನ್ನು ಆಧರಿಸಿ ನಾವು ಅಪಘಾತದಲ್ಲಿ ಭಾಗಿಯಾಗಿದ್ದ ಟ್ರಕ್ ಅನ್ನು ಪತ್ತೆ ಹಚ್ಚಿದೆವು. ಮೊನ್ನೆ ನಾಗ್ಪುರದಿಂದ ಸುಮಾರು 700 ಕಿಮೀ ದೂರವಿರುವ ಗ್ವಾಲಿಯರ್-ಕಾನ್ಪುರ್ ಹೆದ್ದಾರಿಯಿಂದ ಆರೋಪಿಯನ್ನು ಬಂಧಿಸಲಾಯಿತು ಹಾಗೂ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಯಿತು. ನಾವೀಗ ಆರೋಪಿಯನ್ನು ಬಂಧಿಸಿದ್ದು, ಅಪಘಾತ ಸಂಭವಿಸಿದ ಕೇವಲ 36 ಗಂಟೆಗಳಲ್ಲಿ ಈ ಪ್ರಕರಣವನ್ನು ಭೇದಿಸಿದ್ದೇವೆ” ಎಂದು ಪೊಡ್ಡಾರ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರಕಾರವು ವಿಶೇಷ ಉದ್ದೇಶದ ವಾಹಕವೊಂದನ್ನು ರೂಪಿಸಿದ್ದು, ಅದಕ್ಕೆ MARVEL (Maharashtra Research and Vigilance for Enhancded Law Enforcement) ಎಂದು ಹೆಸರಿಸಲಾಗಿದೆ. ಇದು ಇಡೀ ದೇಶದಲ್ಲೇ ರಾಜ್ಯ ಮಟ್ಟದ ಪ್ರಪ್ರಥಮ ಪೊಲೀಸ್ ಕೃತಕ ಬುದ್ಧಿಮತ್ತೆ(AI) ವ್ಯವಸ್ಥೆಯಾಗಿದ್ದು, ಇದರ ಸಂಪೂರ್ಣ ಮಾಲಕತ್ವ ರಾಜ್ಯ ಸರಕಾರದ್ದೇ ಆಗಿದೆ.







