ಹಿಂದುತ್ವ ಪೇಜ್ ಗಳಲ್ಲಿ AI ಬಳಸಿ ಮುಸ್ಲಿಂ ಮಹಿಳೆಯರ ವಿಕೃತ ಚಿತ್ರಣ: ವರದಿ
ಇನ್ಸ್ಟಾಗ್ರಾಮ್ ನಲ್ಲಿವೆ ನೂರಾರು ಇಂತಹ ಪೇಜ್ ಗಳು

ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ʼಸಲ್ಲಿ ಡೀಲ್ಸ್ʼ ಮತ್ತು ʼಬುಲ್ಲಿ ಬಾಯ್ʼ ಅಪ್ಲಿಕೇಷನ್ಗಳು ಈ ಹಿಂದೆ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿಕೊಂಡಿತ್ತು. ಇದೀಗ ಅದೇ ರೀತಿಯ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ. ಕೆಲ ಹಿಂದುತ್ವ ಪರ ಪೇಜ್ ಗಳಲ್ಲಿ AI ಇಮೇಜ್ ಜನರೇಟರ್ಗಳ ಮೂಲಕ ತಯಾರಿಸಿದ ಮುಸ್ಲಿಂ ಮಹಿಳೆಯರ ಅರೆ ಅಶ್ಲೀಲ ಚಿತ್ರಗಳು ಕಂಡು ಬಂದಿದೆ. ಈ ಕಳವಳಕಾರಿ ಅಂಶಗಳನ್ನು thequint.com ವರದಿಯು ಬಹಿರಂಗಪಡಿಸಿದೆ.
2020ರಲ್ಲಿ ʼಸಲ್ಲಿ ಡೀಲ್ಸ್ʼ ಎಂಬ ಅಪ್ಲಿಕೇಷನ್ ಮೂಲಕ ಖ್ಯಾತ ಮುಸ್ಲಿಂ ಮಹಿಳೆಯರ ತಿರುಚಿದ ಚಿತ್ರಗಳನ್ನು ಅಶ್ಲೀಲ ಬರಹಗಳೊಂದಿಗೆ ಪೋಸ್ಟ್ ಮಾಡಲಾಗಿತ್ತು. ಅದಾದ ಸುಮಾರು ಆರು ತಿಂಗಳಲ್ಲಿ ʼಬುಲ್ಲಿ ಬಾಯ್ʼ ಅಪ್ಲಿಕೇಷನ್ ಮೂಲಕ ಮುಸ್ಲಿಂ ಮಹಿಳೆಯರನ್ನು, ಅದರಲ್ಲೂ ಪತ್ರಕರ್ತೆಯರು, ಸಾಮಾಜಿಕ ಕಾರ್ಯಕರ್ತೆಯರು, ವಿದ್ಯಾರ್ಥಿನಿಯರು ಮತ್ತು ಹೆಸರಾಂತ ಮಹಿಳೆಯರ ಚಿತ್ರಗಳನ್ನು ಅಶ್ಲೀಲ ಬರಹಗಳೊಂದಿಗೆ ಪೋಸ್ಟ್ ಮಾಡಲಾಗಿತ್ತು.
ʼಸಲ್ಲಿ ಡೀಲ್ಸ್ʼ ಮತ್ತು ʼಬುಲ್ಲಿ ಬಾಯ್ʼ ಅಪ್ಲಿಕೇಷನ್ ಗಳನ್ನು ಗಿಟ್ಹಬ್ ಎಂಬ ವೆಬ್ಸೈಟ್ ಬಳಸಿ ರಚಿಸಲಾಗಿತ್ತು. ವಿವಾದದ ಬಳಿಕ ಆ ಎರಡೂ ಅಪ್ಲಿಕೇಷನ್ಗಳನ್ನು ನಿರ್ಬಂಧಿಸಲಾಗಿತ್ತು. ಸಲ್ಲಿ ಡೀಲ್ ಆಪ್ಗೆ ಸಂಬಂಧಿಸಿ ಓಂಕಾರೇಶ್ವರ್ ಎಂಬ ಮಧ್ಯಪ್ರದೇಶ ಮೂಲದ ಕಂಪ್ಯೂಟರ್ ಅಪ್ಲಿಕೇಷನ್ ಪದವೀಧರನ ಬಂಧನವಾಗಿತ್ತು. ಬುಲ್ಲಿ ಬಾಯ್ ಗೆ ಸಂಬಂಧಿಸಿ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವನ ಬಂಧನವಾಗಿತ್ತು.
AI ಪ್ರಭಾವ ಜಾಸ್ತಿಯಾಗುತ್ತಿದ್ದಂತೆ ಹಿಂದುತ್ವ ಪರ ಪುಟಗಳಲ್ಲಿ ಮುಸ್ಲಿಂ ಮಹಿಳೆಯರ ಚಾರಿತ್ರ್ಯವಧೆ ಮಾಡುವುದು ಕಂಡು ಬಂದಿದೆ. ಇನ್ಸ್ಟಾಗ್ರಾಮ್ ನಲ್ಲಿ ಕನಿಷ್ಠ 250 ಅಂತಹ ಪುಟಗಳಿವೆ ಎಂಬುದನ್ನು thequint.com ಪತ್ತೆ ಮಾಡಿದೆ. ಅವುಗಳಲ್ಲಿ AI ತಂತ್ರಜ್ಞಾನವನ್ನು ಬಳಸಿ ಹಲವು ಮುಸ್ಲಿಂ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಸಿದ್ಧಪಡಿಸಿ ಪೋಸ್ಟ್ ಮಾಡಲಾಗುತ್ತದೆ. ಫೇಸ್ಬುಕ್ನಲ್ಲಿ ಕೂಡ ಅಂಥ ಪೇಜ್ ಗಳು ಕಂಡು ಬಂದಿದೆ ಎಂದು thequint.com ವರದಿಯು ತಿಳಿಸಿದೆ.
ಎಐ ಚಾಲಿತ ಇಮೇಜ್ ಜನರೇಷನ್ ಪರಿಕರಗಳ ಕಾರಣದಿಂದಾಗಿ ಇಂಟರ್ನೆಟ್ ನಲ್ಲಿ ಮುಸ್ಲಿಂ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡುವ ಪೇಜ್ಗಳು ಮತ್ತು ಅವುಗಳ ಪ್ರಸಾರ ಹೆಚ್ಚಾಗಿದೆ ಎಂಬುದನ್ನು ʼದಿ ಕ್ವಿಂಟ್ʼ ಪತ್ತೆ ಹಚ್ಚಿದೆ.
2021ರಲ್ಲಿ ಸಲ್ಲಿ ಡೀಲ್ಸ್ನಲ್ಲಿ ಕವಯತ್ರಿ ನಬಿಯಾ ಖಾನ್ ಅವರನ್ನು ಗುರಿಯಾಗಿಸಲಾಗಿತ್ತು, ಅವರು ಇದೀಗ ಎಐ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಹಿಂದುತ್ವ ಪರ ಪೇಜ್ ಗಳಲ್ಲಿ AI ಇಮೇಜ್ ಜನರೇಟರ್ಗಳ ಮೂಲಕ ತಯಾರಿಸಲಾದ ಮುಸ್ಲಿಂ ಮಹಿಳೆಯರ ಅಶ್ಲೀಲ ಚಿತ್ರಗಳು ಕಂಡು ಬಂದಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಂತಹ ವೇದಿಕೆಗಳಲ್ಲಿ ಇವುಗಳು ಹೆಚ್ಚುತ್ತಿವೆ ಎಂಬುದನ್ನು ವರದಿ ಹೇಳಿದೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಂತಹ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾದ ತಿರುಚಲಾದ ಎಐ ಚಿತ್ರಗಳಲ್ಲಿ ಹಿಂದೂ ಪುರುಷರೊಂದಿಗೆ ನಿಕಟ ಭಂಗಿಗಳಲ್ಲಿರುವ ರೀತಿಯಲ್ಲಿ ಮುಸ್ಲಿಂ ಮಹಿಳೆಯರನ್ನು ತೋರಿಸಲಾಗುತ್ತದೆ. ಬುರ್ಖಾ ಅಥವಾ ಹಿಜಾಬ್ ಮೂಲಕ ಮುಸ್ಲಿಂ ಮಹಿಳೆಯರನ್ನು ಸೂಚಿಸುವುದು, ರುದ್ರಾಕ್ಷಿ ಮಣಿಗಳು, ತಿಲಕ, ವಿಭೂತಿ ಇಂಥವುಗಳ ಮೂಲಕ ಪುರುಷರು ಹಿಂದೂಗಳೆಂಬುದನ್ನು ಸೂಚಿಸುವುದು ಕಂಡು ಬಂದಿದೆ. ಇಂಥ ಪೋಸ್ಟ್ಗಳು ಮತ್ತು ಹ್ಯಾಶ್ಟ್ಯಾಗ್ಗಳಲ್ಲಿ ಹಿಜಾಬಿ ಎಂಬ ಪದ ಆಗಾಗ ಕಾಣಿಸಿಕೊಳ್ಳುತ್ತದೆ ಎಂಬುದನ್ನು ʼಕ್ವಿಂಟ್ʼ ವರದಿಯು ಉಲ್ಲೇಖಿಸಿದೆ.
ಕೆಲ ಪುಟಗಳಲ್ಲಿ ಹಿಂದಿಯಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಲೈಂಗಿಕ ನಿರಾಸೆಯನ್ನು ಮರೆಮಾಚಲು ಬುರ್ಖಾ ಧರಿಸುತ್ತಾರೆ ಎಂದು ಹೇಳಲಾಗಿದೆ. ಇದಲ್ಲದೆ ಪುರುಷನನ್ನು ಬಲಿಷ್ಠ ಎಂಬಂತೆ ಮತ್ತು ಮಹಿಳೆ ಆತನಿಗೆ ವಿಧೇಯಳಾಗಿರುವಂತೆ, ಬೆದರಿದಂತೆ ಪೋಸ್ಟ್ಗಳಲ್ಲಿ ತೋರಿಸಲಾಗಿದೆ ಎಂಬುದನ್ನು ವರದಿಯು ಹೇಳಿದೆ.
ʼಬುರ್ಖಾ ಮತ್ತು ಹಿಜಾಬ್ ಮುಸ್ಲಿಂ ಮಹಿಳೆಯರಿಗೆ ಒಂದು ಸಂಕೇತವಾಗಿದೆ. ಅವರು ಹೀಗೆ ಬುರ್ಖಾ ಧರಿಸಿದ ಮಹಿಳೆಯನ್ನು ತೋರಿಸಿದಾಗ, ಅದು ಕೇವಲ ಬುರ್ಖಾ ಧರಿಸಿದ ಮಹಿಳೆಯರನ್ನು ಮಾತ್ರವಲ್ಲ, ಇಡೀ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಸಂಕೇತವಾಗಿದೆ. ಈ ಜನಗಳು ತಾವು ದ್ವೇಷಿಸುವ ಮುಸ್ಲಿಂ ಪುರುಷರನ್ನು ಅವಮಾನಿಸಲು ಇಂಥದೊಂದು ಫ್ಯಾಂಟಸಿಯನ್ನು ತಮ್ಮ ತಲೆಯೊಳಗೆ ಕಲ್ಪಿಸಿಕೊಳ್ಳುತ್ತಾರೆ ಮತ್ತು ಆ ಮೂಲಕ ಮಹಿಳೆಯನ್ನು ತಮ್ಮ ಸ್ವಾಧೀನ ಮಾಡಿಕೊಂಡಿದ್ದೇವೆ ಎಂದು ಭ್ರಮಿಸುತ್ತಾರೆ ಎಂದು ಲೇಖಕಿ ಆನಿ ಜೈದಿ ಹೇಳಿರುವ ಬಗ್ಗೆ ಕ್ವಿಂಟ್ ವರದಿ ಉಲ್ಲೇಖಿಸಿದೆ.
ತಾವು ದ್ವೇಷಿಸುವ ಸಮುದಾಯದ ಗುರುತನ್ನು ಕಸಿದುಕೊಳ್ಳುವುದು ಅಥವಾ ಧಾರ್ಮಿಕ ಚಿಹ್ನೆಗಳನ್ನು ತೆಗೆದುಹಾಕುವುದನ್ನು ಇಂಥ ಪ್ರವೃತ್ತಿಯ ಮೂಲಕ ತೋರಿಸಲಾಗುತ್ತದೆ ಮತ್ತು ಅದು ಒಂದು ಸಮುದಾಯವನ್ನು ದುರ್ಬಲಗೊಳಿಸುವ ಮಾರ್ಗವಾಗಿದೆ ಎಂದು ಜೈದಿ ಹೇಳುವುದನ್ನು ಗಮನಿಸಬಹುದು.
ಕೆಲ ಚಿತ್ರಗಳಲ್ಲಿ ಸಾಮೂಹಿಕ ಪ್ರಾಬಲ್ಯದ ಒಂದು ರೂಪವಾಗಿ, ಮುಸ್ಲಿಂ ಮಹಿಳೆಯನ್ನು ಬಹಳಷ್ಟು ಹಿಂದೂ ಪುರುಷರು ಸುತ್ತುವರಿದಿರುವಂತೆ ತೋರಿಸಲಾಗುತ್ತದೆ. ಬಹತೇಕ ಇಂಥ ಎಲ್ಲ ಪೋಸ್ಟ್ಗಳು ಲೈಂಗಿಕವಾಗಿ ಸ್ವಾಧೀನ ಸಾಧಿಸಿರುವ, ಆ ಮೂಲಕ ಇಡೀ ಸಮುದಾಯದ ಪ್ರಾಬಲ್ಯವನ್ನು ತೋರಿಸುವ ಮತ್ತು ಮುಸ್ಲಿಂ ಪುರುಷರಿಗಿಂತ ತಾವು ಶ್ರೇಷ್ಠ ಎಂದು ಒತ್ತಿಹೇಳುವ ಮನೋ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ದಿ ಕ್ವಿಂಟ್ ವರದಿಯು ವಿಶ್ಲೇಷಿಸಿದೆ.
ಈ ಪುಟಗಳಲ್ಲಿನ ಕೆಲವು ಚಿತ್ರಗಳು ಮತ್ತು ಮೀಮ್ಗಳಲ್ಲಿ ಹಿಂದೂ ಪುರುಷನ ಜಾತಿ ಗುರುತನ್ನು ಹೇಳಲಾಗಿದೆ. ಝಾಲಿಮ್ ಪಂಡಿತ್, ಝಾಲಿಮ್ ಬ್ರಾಹ್ಮಣ, ಝಾಲಿಮ್ ಠಾಕೂರ್ ಎಂದು ಪುಟಗಳಿಗೆ ಶೀರ್ಷಿಕೆಗಳನ್ನು ಕೊಡಲಾಗಿದೆ. ಮುಸ್ಲಿಂ ಮಹಿಳೆಯರ ಸ್ಪಷ್ಟ ಚಿತ್ರಗಳನ್ನು ಪೋಸ್ಟ್ ಮಾಡುವ ಝಾಲಿಮ್ ಪಂಡಿತ್ ಅಥವಾ ಜಾಲಿಮ್ ಬ್ರಾಹ್ಮಣ ಹೆಸರಿನ ಪುಟಗಳ ಮಾದರಿಯಲ್ಲೇ ಕನಿಷ್ಠ 60 ಪುಟಗಳು ಇನ್ಸ್ಟಾಗ್ರಾಂನಲ್ಲಿ ಕಂಡಿರುವುದಾಗಿ ವರದಿ ಉಲ್ಲೇಖಿಸಿದೆ.
ಮುಸ್ಲಿಂ ಮಹಿಳೆಯನ್ನು ಸೆಳೆಯುವುದು ಒಬ್ಬ ಪಂಡಿತ್ ಗೆ ಮಾತ್ರ ಸಾಧ್ಯ ಎಂದು ಕೆಲ ಪೋಸ್ಟ್ಗಳ ಜೊತೆ ಬರೆಯಲಾಗಿದೆ. ಆದರೆ, ಯಾವುದೇ ಒಬಿಸಿ ಅಥವಾ ದಲಿತ ಜಾತಿ ಗುರುತನ್ನು ಒತ್ತಿಹೇಳುವ ಪುಟಗಳು ಅಥವಾ ಅವರ ಯಾವುದೇ ಪ್ರಾದೇಶಿಕ ಗುರುತನ್ನು ಸೂಚಿಸುವ ಪುಟಗಳು ಮತ್ತು ಅಂತಹ ಚಿತ್ರಗಳನ್ನು ಬಳಸಿರುವುದು ಕಂಡು ಬಂದಿಲ್ಲ ಎಂದು ವರದಿ ತಿಳಿಸಿದೆ.
ಝಾಲಿಮ್ ಠಾಕೂರ್ ಎಂಬ ಹೆಸರಿನ ಹಲವು ಪುಟಗಳಲ್ಲಿ ಅಶ್ಲೀಲ ವಿಷಯಗಳೇ ಇವೆ. ಆದರೆ ಇವುಗಳಲ್ಲಿ ಒಂದು ಭಾಗ ಮಾತ್ರ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿರಿಸಿಕೊಂಡಿದ್ದು, ಅವು ಹೆಚ್ಚಾಗಿ ಒಟ್ಟಾರೆ ಸ್ತ್ರೀದ್ವೇಷದ ಚಿತ್ರಗಳನ್ನು ಒಳಗೊಂಡಿರುವುದನ್ನು ವರದಿ ಗುರುತಿಸಿದೆ.
ಕೆಲವು ಚಿತ್ರಗಳಲ್ಲಿ ಹಿಂದೂ ಪುರುಷರು ಮುಸ್ಲಿಂ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯವನ್ನು ತೋರಿಸುವ ಮಟ್ಟಕ್ಕೂ ಹೋಗಲಾಗಿದೆ ಮತ್ತು ಅಂಥ ಚಿತ್ರಗಳು ಎಐ ಮೂಲಕ ರಚಿಸಲಾದ ಚಿತ್ರಗಳಿಗಿಂತ ಹೆಚ್ಚು ಸ್ಪಷ್ಟವಾಗಿವೆ. ಹೆಚ್ಚಾಗಿ ಪಾಶ್ಚಿಮಾತ್ಯ ಪೋರ್ನ್ ಚಿತ್ರಗಳನ್ನು ಬಳಸಿಕೊಂಡು, ಫೊಟೊಶಾಪ್ ಮೂಲಕ ಪುರುಷನ ಮೇಲೆ ತಿಲಕ ಅಥವಾ ಓಂ ಚಿಹ್ನೆಯನ್ನು ಮತ್ತು ಮಹಿಳೆಯ ಮೇಲೆ ಹಿಜಾಬ್ ಅನ್ನು ಚಿತ್ರಿಸಲಾಗುತ್ತದೆ. ಅನೇಕ ಸಲ ಒರಟು ವ್ಯಂಗ್ಯಚಿತ್ರಗಳನ್ನು ಸಹ ಬಳಸಲಾಗುತ್ತದೆ ಎಂದು ವರದಿ ಹೇಳಿದೆ.
ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗುವ ಹಿಂಸಾಚಾರದ ಪ್ರತಿಪಾದನೆ ಇತ್ತೀಚಿನ ವಿದ್ಯಮಾನವೇನೂ ಅಲ್ಲ. ಛತ್ರಪತಿ ಶಿವಾಜಿ ಮತ್ತು ಚಿಮ್ಮಾಜಿ ಅಪ್ಪಾ ಅವರಂತಹ ಹಿಂದೂ ಆಡಳಿತಗಾರರು ಮುಸ್ಲಿಂ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕಿರುಕುಳವನ್ನು ಮುಸ್ಲಿಂ ಆಡಳಿತಗಾರರ ವಿರುದ್ಧ ಸೇಡು ತೀರಿಸಿಕೊಳ್ಳುವ ಕ್ರಿಯೆಯಾಗಿ ಬಳಸಬೇಕಿತ್ತು ಎಂದು ಸಾವರ್ಕರ್ ಸಿಕ್ಸ್ ಗ್ಲೋರಿಯಸ್ ಇಪೊಕ್ಸ್ ನಲ್ಲಿ ವಾದಿಸಿರುವುದನ್ನು ವರದಿ ಉಲ್ಲೇಖಿಸುತ್ತದೆ.
ಇತ್ತೀಚಿಗೆ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದವರ ಬಿಡುಗಡೆಯ ನಂತರ ಹಿಂದುತ್ವ ಸಂಘಟನೆಗಳು ಅವರನ್ನು ಸನ್ಮಾನಿಸಿದ್ದರು. 2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಮುಸ್ಲಿಂ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಹಿಂದುತ್ವ ಸಂಘಟನೆಗಳು ಹೀರೋಗಳಂತೆ ಮೆರವಣಿಗೆ ನಡೆಸಿದ್ದರು. ಉತ್ತರ ಪ್ರದೇಶದ ಹಿಂದುತ್ವ ಸಮಾರಂಭಗಳಲ್ಲಿ ಕೂಡ ಮುಸ್ಲಿಂ ಮಹಿಳೆಯರ ಸಮಾಧಿಗಳನ್ನು ಅಗೆದು ಅತ್ಯಾಚಾರ ಮಾಡಬೇಕೆಂಬ ಹೇಳಿಕೆಗಳನ್ನು ನೀಡಲಾಗಿತ್ತು. ಈಗ ಸಲ್ಲಿ ಡೀಲ್ಸ್ ಮತ್ತು ಬುಲ್ಲಿ ಬಾಯ್ ಮಾದರಿಯಲ್ಲೇ ಮುಸ್ಲಿಂ ಮಹಿಳೆಯರ ಅವಹೇಳನ ಮಾಡುವ ಚಿತ್ರಗಳನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದು ವರದಿಯು ತಿಳಿಸಿದೆ.