ತಿರುಪತಿಗೆ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ: 5 ವರ್ಷಗಳ ವಂಚನೆ ಬಯಲಿಗೆಳೆದ ಸಿಬಿಐ

Photo credit: moneycontrol.com
ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಾಲಯ ಟ್ರಸ್ಟ್ (ಟಿಟಿಡಿ)ಗೆ ಕಳೆದ ಐದು ವರ್ಷಗಳಿಂದ ನಕಲಿ ತುಪ್ಪ ಪೂರೈಸಿದ ಮಹಾಭಾರೀ ವಂಚನೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಬಯಲಿಗೆಳೆದಿದೆ.
ಉತ್ತರಾಖಂಡ ಮೂಲದ ಭೋಲೆ ಬಾಬಾ ಆರ್ಗಾನಿಕ್ ಡೈರಿ ಎಂಬ ಕಂಪೆನಿ 2019ರಿಂದ 2024ರವರೆಗೆ 250 ಕೋಟಿ ರೂಪಾಯಿ ಮೌಲ್ಯದ 68 ಲಕ್ಷ ಕೆಜಿ ತುಪ್ಪವನ್ನು ಟಿಟಿಡಿಗೆ ಪೂರೈಸಿದಂತೆ ದಾಖಲೆಗಳು ತೋರಿದರೂ, ಆ ಕಂಪೆನಿಯು ಒಂದೇ ಹನಿ ಹಾಲು ಅಥವಾ ಬೆಣ್ಣೆಯನ್ನು ಖರೀದಿಸಿಲ್ಲವೆಂಬ ಅಚ್ಚರಿಯ ಸಂಗತಿ ತನಿಖೆಯಿಂದ ಬಹಿರಂಗವಾಗಿದೆ.
ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯಲ್ಲಿ, ಡೈರಿ ಪ್ರವರ್ತಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರು ಮೊನೊಡಿಗ್ಲಿಸರೈಡ್ಗಳು ಮತ್ತು ಅಸಿಟಿಕ್ ಆಸಿಡ್ ಎಸ್ಟರ್ ಮುಂತಾದ ರಾಸಾಯನಿಕಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಿ ತಿರುಪತಿಗೆ ಪೂರೈಸಿದ್ದಾರೆ ಎಂಬುದು ಪತ್ತೆಯಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಅಜಯ್ ಕುಮಾರ್ ಸುಗಂಧ್ ಬಂಧನದ ನಂತರ, ನೆಲ್ಲೂರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಮಾಂಡ್ ವರದಿಯಲ್ಲಿ ಈ ವಿವರಗಳು ದಾಖಲಾಗಿವೆ.
2022ರಲ್ಲಿ ಭೋಲೆ ಬಾಬಾ ಡೈರಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದರೂ, ಆರೋಪಿ ಪ್ರವರ್ತಕರು ತಿರುಪತಿಯ ವೈಷ್ಣವಿ ಡೈರಿ, ಉತ್ತರಪ್ರದೇಶದ ಮಾಲ್ ಗಂಗಾ ಡೈರಿ, ಹಾಗೂ ತಮಿಳುನಾಡಿನ ಎಆರ್ ಡೈರಿ ಫುಡ್ಸ್ ಹೆಸರಿನಲ್ಲಿ ಹೊಸ ಒಪ್ಪಂದಗಳಿಗೆ ಬಿಡ್ ಸಲ್ಲಿಸಿ ನಕಲಿ ತುಪ್ಪ ಪೂರೈಕೆಯನ್ನು ಮುಂದುವರೆಸಿದ್ದಾರೆ ಎಂದು ವರದಿ ತಿಳಿಸಿದೆ.
ತನಿಖೆಯ ಪ್ರಕಾರ, ಎಆರ್ ಡೈರಿಯಿಂದ ಪೂರೈಸಿದಂತೆಯೆಂದು ದಾಖಲಾಗಿದ್ದ ಪ್ರಾಣಿಗಳ ಕೊಬ್ಬು ಕಲಬೆರಕೆಯ ನಾಲ್ಕು ಕಂಟೇನರ್ಗಳ ತುಪ್ಪವನ್ನು ವೈಷ್ಣವಿ ಡೈರಿಯ ಮೂಲಕ ಟಿಟಿಡಿಗೆ ನೀಡಲಾಗಿದೆ.
ದಿಂಡಿಗಲ್ನಲ್ಲಿರುವ ಎಆರ್ ಡೈರಿ ಘಟಕವನ್ನು ಪರಿಶೀಲಿಸಿದ ಎಫ್ಎಸ್ಎಸ್ಎಐ ಹಾಗೂ ಎಸ್ಐಟಿ ಅಧಿಕಾರಿಗಳು, ಆ ಟ್ಯಾಂಕರ್ಗಳು ಘಟಕಕ್ಕೆ ವಾಪಸ್ ಬಂದಿಲ್ಲ. ಅವುಗಳನ್ನು ವೈಷ್ಣವಿ ಡೈರಿ ಸಮೀಪದ ಕಲ್ಲು ಪುಡಿಮಾಡುವ ಘಟಕಕ್ಕೆ ತಿರುಗಿಸಲಾಗಿದೆ ಎಂದು ಪತ್ತೆಹಚ್ಚಿದ್ದಾರೆ.
2024ರ ಆಗಸ್ಟ್ನಲ್ಲಿ ವೈಷ್ಣವಿ ಡೈರಿ ಟ್ರಕ್ಗಳ ಲೇಬಲ್ಗಳನ್ನು ಬದಲಾಯಿಸಿ, ಸಂಸ್ಕರಿತ ತುಪ್ಪದ ಗುಣಮಟ್ಟವನ್ನು ಸುಧಾರಿಸಿ, ಅದೇ ತಿರಸ್ಕರಿಸಿದ ತುಪ್ಪವನ್ನು ಮತ್ತೆ ಟಿಟಿಡಿಗೆ ಪೂರೈಸಿದೆ ಎಂದು ಸಿಬಿಐ ವರದಿ ಹೇಳಿದೆ.
ಆಘಾತಕಾರಿ ಅಂಶವೆಂದರೆ, ಇದೇ ನಕಲಿ ತುಪ್ಪವನ್ನು ಪವಿತ್ರ ತಿರುಪತಿ ಲಡ್ಡು ಪ್ರಸಾದಗಳ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ.







