ಅಕ್ರಮ ವಲಸೆ: ಕಳೆದ 15 ವರ್ಷಗಳಲ್ಲಿ ಅಮೆರಿಕದಿಂದ 15,000 ಭಾರತೀಯರು ಗಡಿಪಾರು

Photo credit: PTI
ಹೊಸದಿಲ್ಲಿ: ಅಮೆರಿಕ ಪ್ರಾಧಿಕಾರಗಳು ಅಕ್ರಮ ಭಾರತೀಯ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಹೊಸದಲ್ಲವಾಗಿದ್ದು, ಕಳೆದ 15 ವರ್ಷಗಳಲ್ಲಿ ಒಟ್ಟು 15,756 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ ಎಂದು ಗುರುವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಜೈಶಂಕರ್, “ಅಮೆರಿಕವು ಅಕ್ರಮ ವಲಸಿಗರನ್ನು ಗಡೀಪಾರು ಮಾಡುವುದು ಇದು ಹೊಸದೇನಲ್ಲ. ಇದು ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಈ ನೀತಿಯು ಕೇವಲ ಒಂದು ದೇಶಕ್ಕೆ ಅನ್ವಯವಾಗುವುದಲ್ಲ. ನಮ್ಮ ದೃಷ್ಟಿಕೋನವು ಅಕ್ರಮ ವಲಸಿಗರ ಮೇಲಿನ ಕಾರ್ಯಾಚರಣೆಯ ಮೇಲಿರಬೇಕು. ಗಡೀಪಾರಿಗಾಗೊಳಗಾಗುತ್ತಿರುವವರನ್ನು ಅನುಚಿತವಾಗಿ ನಡೆಸಿಕೊಳ್ಳದಂತೆ ಖಾತರಿ ಪಡಿಸಲು ನಾವು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ” ಎಂದು ತಿಳಿಸಿದರು.
ಜೈಶಂಕರ್ ಹಂಚಿಕೊಂಡ ದತ್ತಾಂಶಗಳ ಪ್ರಕಾರ, ಕೋವಿಡ್ ಸಾಂಕ್ರಾಮಿಕ ವರ್ಷಗಳಾದ 2019ರಲ್ಲಿ 2,042 ಮಂದಿಯನ್ನು ಅಮೆರಿಕ ಗಡಿಪಾರು ಮಾಡಿದ್ದು, 2020ರಲ್ಲಿ 1,889 ಮಂದಿಯನ್ನು ಗಡಿಪಾರು ಮಾಡಿದೆ ಎಂದು ಹೇಳಲಾಗಿದೆ.
2009ರಲ್ಲಿ 734, 2010ರಲ್ಲಿ 799, 2011ರಲ್ಲಿ 597, 2012ರಲ್ಲಿ 530, 2013ರಲ್ಲಿ 515, 2014ರಲ್ಲಿ 591, 2015ರಲ್ಲಿ 708, 2016ರಲ್ಲಿ 1,303, 2017ರಲ್ಲಿ 1,024, 2018ರಲ್ಲಿ 1,180, 2019ರಲ್ಲಿ 2,042, 2020ರಲ್ಲಿ 1,889, 2021ರಲ್ಲಿ 805, 2022ರಲ್ಲಿ 862, 2023ರಲ್ಲಿ 617, 2024ರಲ್ಲಿ 1,368 ಹಾಗೂ 2025ರ ಫೆಬ್ರವರಿ 5ರವರೆಗೆ 104 ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕ ಗಡಿಪಾರು ಮಾಡಿದೆ ಎಂದು ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ.







