ಪಾಕ್ ಏಜೆಂಟ್‌ಗಳು CRPF ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಮ್ ಜಾಟ್‌ಗೆ ಬೇಹುಗಾರಿಕೆಗಾಗಿ ಹೇಗೆ ಹಣ ಪಾವತಿಸಿದರು?

ಹೊಸದಿಲ್ಲಿ : ಪಾಕಿಸ್ತಾನದ ಏಜೆಂಟ್‌ಗೆ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಸಿಆರ್‌ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮೋತಿ ರಾಮ್ ಜಾಟ್ ಎಂಬಾತನನ್ನು ಬಂಧಿಸಿದೆ. ತನಿಖಾ ತಂಡ ಭಾರತದಲ್ಲಿ ಬೇಹುಗಾರಿಕೆಗೆ ಬಳಸುತ್ತಿದ್ದ ಹಣಕಾಸು ಜಾಲವನ್ನು ಕೂಡ ಪತ್ತೆಹಚ್ಚಿದೆ. Indianexpress ವರದಿ ಪ್ರಕಾರ, ತನಿಖಾ ಸಂಸ್ಥೆಯು ಈಗ ಚಾರ್ಜ್‌ಶೀಟ್ ಅನ್ನು ಸಿದ್ಧಪಡಿಸುತ್ತಿದೆ. ಇದರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ವ್ಯಾಪಾರ ಮತ್ತು ಪ್ರಯಾಣದ ಸೋಗಿನಲ್ಲಿ ಹಣವನ್ನು ಹೇಗೆ ಅಕ್ರಮವಾಗಿ ವರ್ಗಾಯಿಸಿದೆ ಎಂಬುದನ್ನು ವಿವರಿಸುತ್ತದೆ.
ಭಾರತದಲ್ಲಿನ ಅಂಗಡಿ ಮಾಲಕರು ಪಾಕಿಸ್ತಾನ ನಿರ್ಮಿತ ಬಟ್ಟೆಗಳಿಗೆ ದುಬೈನಲ್ಲಿರುವ ದಲ್ಲಾಳಿಗಳ ಮೂಲಕ ಯುಪಿಐ ಪಾವತಿಗಳನ್ನು ಮಾಡುತ್ತಿದ್ದರು. ಬ್ಯಾಂಕಾಕ್‌ನಲ್ಲಿ ಭಾರತೀಯ ಮೂಲದ ಕಂಪೆನಿಗಳ ಮೂಲಕ ವಿದೇಶಿ ವಿನಿಮಯ ವಹಿವಾಟುಗಳನ್ನು ನಡೆಸಲಾಗುತ್ತಿತ್ತು. ಇದಲ್ಲದೆ ದಿಲ್ಲಿ ಮತ್ತು ಮುಂಬೈನಲ್ಲಿ ಮೊಬೈಲ್ ಅಂಗಡಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಮೋತಿ ರಾಮ್ ಜಾಟ್ ಈ ಮೊದಲು ಪಹಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಬ್ಯಾಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. 2025ರ ಏಪ್ರಿಲ್ 22ರಂದು ನಡೆದ ಪೆಹಲ್ಗಾಮ್ ದಾಳಿಗೆ ಐದು ದಿನಗಳ ಮುನ್ನ ಆತನನ್ನು ದಿಲ್ಲಿಗೆ ವರ್ಗಾವಣೆ ಮಾಡಲಾಗಿತ್ತು.
ತನಿಖಾಧಿಕಾರಿಗಳು ಪ್ರಕಾರ, ಮೋತಿ ರಾಮ್ ಜಾಟ್ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಅಕ್ಟೋಬರ್ 2023ರಿಂದ ಏಪ್ರಿಲ್ 2025 ರ ನಡುವೆ ಪಾಕಿಸ್ತಾನ ಗುಪ್ತಚರ ಏಜೆಂಟ್ ಸಲೀಂ ಅಹ್ಮದ್ ಎಂಬಾತನಿಂದ 1.90 ಲಕ್ಷ ರೂ.ಗಳನ್ನು ಪಡೆದಿದ್ದಾನೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ವ್ಯಾಪಾರ ಆಧಾರಿತ ಹಣ ವರ್ಗಾವಣೆ, ಅಕ್ರಮ ವಿದೇಶಿ ವಿನಿಮಯ ಸೇರಿದಂತೆ ಕಾನೂನುಬದ್ಧ ವ್ಯವಸ್ಥೆಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಈ ಹಣವನ್ನು ಅವರ ಮತ್ತು ಪತ್ನಿಯ ಖಾತೆಗಳ ಮೂಲಕ ವರ್ಗಾಯಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಈ ಅಕ್ರಮ ಹಣದ ಜಾಲ ಸಾಮಾನ್ಯವಾಗಿ ಸಣ್ಣ ವ್ಯಾಪಾರಿಗಳು ಮತ್ತು ಸೇವಾ ಸಂಸ್ಥೆಗಳ ಮೂಲಕ ನಡೆದಿತ್ತು. ಇವರಿಗೆ ತಮ್ಮನ್ನು ಹಣದ ಮಾರ್ಗವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದೇ ತಿಳಿದಿರಲಿಲ್ಲ.
ಬಟ್ಟೆ, ಆಭರಣ, ಬೀಜಗಳು ಮತ್ತು ಪಾದರಕ್ಷೆಗಳಂತಹ ವಸ್ತುಗಳ ಅಂತಾರಾಷ್ಟ್ರೀಯ ವ್ಯಾಪಾರ ನಡೆದಿದೆ. ಜಾಟ್ ಖಾತೆಯಲ್ಲಿನ ಮೂರು ಶಂಕಾಸ್ಪದ ವ್ಯವಹಾರಗಳನ್ನು ಪರಿಶೀಲಿಸಿದಾಗ, ಪಾಕಿಸ್ತಾನದಲ್ಲಿ ತಯಾರಿಸಿದ ಬಟ್ಟೆಗಳು, ವಿಶೇಷವಾಗಿ ಲಕ್ಸುರಿ ಬ್ರಾಂಡ್ ಸೂಟ್‌ಗಳು, ದಿಲ್ಲಿ ಮತ್ತು ಪಾಟ್ನಾದ ಸಣ್ಣ ಅಂಗಡಿಗಳ ಮೂಲಕ ಭಾರತಕ್ಕೆ ತರಲಾಗಿತ್ತು ಎಂದು ಎನ್ಐಎ ಅಧಿಕಾರಿಯೊಬ್ಬರು ಹೇಳಿದರು.
ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತ ಪಾಕಿಸ್ತಾನದ ನೇರ ಆಮದುಗಳ ಮೇಲೆ 200% ಸುಂಕ ವಿಧಿಸಿದ್ದರಿಂದ, ಈ ವಸ್ತುಗಳನ್ನು ದುಬೈ ಮೂಲಕ ಯುಎಇ ಕಾರ್ಗೋ ಏಜೆನ್ಸಿಗಳ ಸಹಾಯದಿಂದ ಭಾರತಕ್ಕೆ ತರಲಾಗುತ್ತಿತ್ತು. ದುಬೈನಲ್ಲಿರುವ ಸರಕು ಘಟಕಗಳು ದಲ್ಲಾಳಿಗಳಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಅಧಿಕಾರಿಗಳು ವಿವರಿಸಿದರು. ಈ ದಲ್ಲಾಳಿಗಳು ಕೆಲವೊಮ್ಮೆ ಅಂಗಡಿ ಮಾಲಕರಿಗೆ ಕೆಲವು ವ್ಯಕ್ತಿಗಳ ಫೋನ್ ಸಂಖ್ಯೆಗಳಿಗೆ UPI ಮೂಲಕ 3,500 ರಿಂದ 12,000ವರೆಗಿನ ಸಣ್ಣ ಪಾವತಿಗಳನ್ನು ಮಾಡುವಂತೆ ಸೂಚಿಸುತ್ತಿದ್ದರು ಎಂದು ಅಧಿಕಾರಿ ಹೇಳಿದರು.
ಬ್ಯಾಂಕಾಕ್‌ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಗಳು ಪಾಕ್ ಗುಪ್ತಚರ ಏಜೆಂಟ್ ಸಹಚರರಾದ ಹಲವಾರು ಭಾರತೀಯ ಮೂಲದ ಖಾಸಗಿ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಂಡುಬಂದಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬ್ಯಾಂಕಾಕ್‌ನಲ್ಲಿ ವಾಸಿಸುವ ಕೆಲವು ಭಾರತೀಯ ಮೂಲದ ವ್ಯಕ್ತಿಗಳು ಅಲ್ಲಿನ ಖಾಸಗಿ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಸಂಸ್ಥೆಗಳು ಪ್ರವಾಸಿಗರನ್ನು ಸಂಪರ್ಕಿಸಿ ಥಾಯ್ ಬಹ್ತ್‌ಗೆ ಬದಲಾಗಿ ಭಾರತೀಯ ರೂಪಾಯಿಗೆ ಆಕರ್ಷಕ ವಿನಿಮಯ ದರ ನೀಡುವುದಾಗಿ ಹೇಳುತ್ತವೆ. ಬ್ಯಾಂಕಾಕ್‌ನಲ್ಲಿ ಥಾಯ್ ಬಹ್ತ್‌ನ ನಗದು ಪಾವತಿಗಳನ್ನು ಸ್ವೀಕರಿಸಿದ ನಂತರ ಅವರು ತಮ್ಮ ಭಾರತೀಯ ಬ್ಯಾಂಕ್ ಖಾತೆಗಳನ್ನು ಮತ್ತು ಭಾರತದಲ್ಲಿ ವಾಸಿಸುವ ಅವರ ಸಂಬಂಧಿಕರ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಭಾರತೀಯ ಕರೆನ್ಸಿಯಲ್ಲಿ ಸಮಾನ ಮೊತ್ತವನ್ನು ಪ್ರವಾಸಿಗರ ಭಾರತೀಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಾರೆ. ಅವರು ಹಿಂದಿರುಗಿದ ನಂತರ ಅದನ್ನು ಹಿಂಪಡೆಯುತ್ತಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.
ದಿಲ್ಲಿ ಮತ್ತು ಮುಂಬೈನಲ್ಲಿರುವ ಸ್ಥಳೀಯ ಮೊಬೈಲ್ ಫೋನ್ ಚಿಲ್ಲರೆ ವ್ಯಾಪಾರಿಗಳು, ಅವರು ಆನ್‌ಲೈನ್ ಬ್ಯಾಂಕಿಂಗ್ ವೇದಿಕೆಗಳ ಮೂಲಕ ಹಣ ರವಾನೆ ಸೇವೆಗಳನ್ನು ಒದಗಿಸುತ್ತಿದ್ದರು. ಈ ಸೇವೆಗಳು ಪ್ರಾಥಮಿಕವಾಗಿ ವಲಸೆ ಕಾರ್ಮಿಕರು ಮತ್ತು ಮನೆಗೆ ಹಣ ಕಳುಹಿಸುವ ದಿನಗೂಲಿ ಕಾರ್ಮಿಕರಿಗಾಗಿ ಇದ್ದವು.
ಶಂಕಿತರು ತಮ್ಮ ಗುರುತನ್ನು ರಹಸ್ಯವಾಗಿಟ್ಟುಕೊಂಡು ಪಾಕ್ ಗುಪ್ತಚರ ಅಧಿಕಾರಿಗಳ ಆದೇಶದ ಮೇರೆಗೆ ಜಾಟ್ ಅವರ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದರು. ಮೇ ತಿಂಗಳಲ್ಲಿ ಎನ್ಐಎ ತಂಡಗಳು ಎಂಟು ರಾಜ್ಯಗಳಲ್ಲಿ 15 ಸ್ಥಳಗಳನ್ನು ಶೋಧಿಸಿ ಜಾಟ್ ಅವರ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ ಹಲವಾರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿವೆ ಎಂದು ಅಧಿಕಾರಿಯೋರ್ವರು ಹೇಳಿದರು.







