ತ್ರಿಶೂರ್ | ರೈಲ್ವೆ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ: ನೂರಾರು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮ

Image Credit: Screengrab X/@TheSouthfirst
ತ್ರಿಶೂರ್: ರವಿವಾರ ತ್ರಿಶೂರ್ ರೈಲ್ವೆ ಪಾರ್ಕಿಂಗ್ ಪ್ರದೇಶದಲ್ಲಿ ನೂರಾರು ವಾಹನಗಳು ಅಗ್ನಿಗಾಹುತಿಯಾಗಿವೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾನೆ ಸುಮಾರು 6.30ರ ವೇಳೆಗೆ ಪಾವತಿ ಮಾಡಿದ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 6.45ರ ವೇಳೆಗೆ ಈ ಕುರಿತು ಮಾಹಿತಿ ಸ್ವೀಕರಿಸಿದೆವು ಎಂದೂ ಅಧಿಕಾರಿಗಳು ಹೇಳಿದ್ದಾರೆ.
ವಿದ್ಯುತ್ ತಂತಿಯಲ್ಲಿ ಕಾಣಿಸಿಕೊಂಡ ಬೆಂಕಿಯ ಕಿಡಿಯೊಂದು, ವಾಹನವೊಂದರದ ಮೇಲೆ ಹಾಕಿದ್ದ ಮೇಲು ಹೊದಿಕೆಯ ಮೇಲೆ ಬಿದ್ದ ಪರಿಣಾಮ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಪಾರ್ಕಿಂಗ್ ಪ್ರದೇಶದಲ್ಲಿ ಸುಮಾರು 400 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು ಎಂದು ಅಂದಾಜಿಸಿರುವ ಅಧಿಕಾರಿಗಳು, ಅವುಗಳಲ್ಲಿ ಬಹುತೇಕ ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ತಿಳಿಸಿದ್ದಾರೆ.
ಬೆಂಕಿಯ ಜ್ವಾಲೆಗಳನ್ನು ನಂದಿಸಲು ಮೂರು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಬೆಳಗ್ಗೆ ಸುಮಾರು 7.45ರ ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.





