ರಾಜ್ಯಪಾಲರ ವರ್ತನೆಗಳಿಂದ ಘಾಸಿಯಾಗಿದೆ: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್

ಎಂ.ಕೆ. ಸ್ಟಾಲಿನ್| PC: PTI
ಚೆನ್ನೈ, ಜ. 24: ದ್ರಾವಿಡ ಮಾದರಿಯ ಸರಕಾರದಿಂದಾಗಿ ತಮಿಳುನಾಡು ಇತರ ರಾಜ್ಯಗಳನ್ನು ಅಭಿವೃದ್ಧಿಯಲ್ಲಿ ಹಿಂದಿಕ್ಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಹೇಳಿದ್ದಾರೆ. ಅದೇ ವೇಳೆ, ರಾಜ್ಯ ವಿಧಾನಸಭಾ ಕಲಾಪಗಳಲ್ಲಿನ ರಾಜ್ಯಪಾಲರ ವರ್ತನೆ ಬಗ್ಗೆ ಖೇದ ವ್ಯಕ್ತಪಡಿಸಿದರು.
ನಿರಂತರ ಜನಪರ ಯೋಜನೆಗಳ ಜಾರಿಯ ಮೂಲಕ ತಮಿಳುನಾಡು ತಲೆಯೆತ್ತಿ ನಿಂತಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ಮಾತನಾಡುತ್ತಾ ಸ್ಟಾಲಿನ್ ಹೇಳಿದರು. ‘‘ಇತರ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡು ಹೆಚ್ಚು ಅಭಿವೃದ್ಧಿ ಹೊಂದಿದೆ. ಇದಕ್ಕೆ ಕಾರಣ ನಮ್ಮ ಯೋಜನೆಗಳು. ನಮ್ಮ ಸರಕಾರದ ಮಟ್ಟಿಗೆ ಹೇಳುವುದಾದರೆ, ಒಂದು ಸಾಧನೆಯ ಬಳಿಕ ಅದಕ್ಕಿಂತ ದೊಡ್ಡ ಇನ್ನೊಂದು ಸಾಧನೆ ಬರುತ್ತದೆ. ಸಾಧನೆಯ ಮೇಲೆ ಸಾಧನೆ ಮಾಡುವುದು ದ್ರಾವಿ ಮಾದರಿ ಸರಕಾರದ ಲಕ್ಷಣವಾಗಿದೆ’’ ಎಂದು ಅವರು ನುಡಿದರು.
ರಾಜ್ಯಪಾಲ ಆರ್.ಎನ್. ರವಿ ಮೇಲೆ ವಾಗ್ದಾಳಿ ನಡೆಸಿದ ಅವರು, ‘‘ರಾಜ್ಯಪಾಲರು ರಾಜ್ಯ ಸರಕಾರದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪದೇ ಪದೇ ಅದೇ ಕಾರಣವನ್ನು ಹೇಳಿ ವಿಧಾನಸಭೆಯಿಂದ ಹೊರನಡೆಯುತ್ತಾರೆ. ನಾನು ರಾಷ್ಟ್ರ ಮತ್ತು ರಾಷ್ಟ್ರಗೀತೆಗೆ ಅತ್ಯಂತ ಹೆಚ್ಚಿನ ಗೌರವ ಹೊಂದಿರುವವ. ದೇಶಭಕ್ತಿಯ ಬಗ್ಗೆ ನಮಗೆ ಯಾರೂ ಭಾಷಣ ಮಾಡುವ ಅಗತ್ಯವಿಲ್ಲ. ರಾಜ್ಯಪಾಲರ ವರ್ತನೆಗಳು ನೋವು ತರುತ್ತವೆ. ವಿಧಾನಸಭೆಯಲ್ಲಿ, ಆರಂಭದಲ್ಲಿ ತಮಿಳು ತಾಯಿ ವಳ್ತುವನ್ನು ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವುದು ಸಂಪ್ರದಾಯವಾಗಿದೆ’’ ಎಂದು ಕರುಣಾನಿಧಿ ಹೇಳಿದರು.







