ಫ್ಯಾಷನ್ ಬಳೆ ಧರಿಸಿದ್ದಕ್ಕೆ ಥಳಿಸಿದ ಪತಿ, ಸಂಬಂಧಿಕರು ; ದೂರು ದಾಖಲು
ಸಾಂದರ್ಭಿಕ ಚಿತ್ರ \ Photo: PTI
ಥಾಣೆ: ಫ್ಯಾಷನ್ ಬಳೆಗಳನ್ನು ಧರಿಸಿದ್ದನ್ನು ವಿರೋಧಿಸಿ ಪತ್ನಿಗೆ ಥಳಿಸಿದ ಆರೋಪದ ಮೇಲೆ ನವಿ ಮುಂಬೈನ ದಿಘಾದಲ್ಲಿ ಆಕೆಯ ಪತಿ ಮತ್ತು ಆತನ ಇಬ್ಬರು ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
23 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ರಬಲೆ ಎಂಐಡಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಸಂತ್ರಸ್ತೆಯ ಪತಿ ಪ್ರದೀಪ್ ಅರ್ಕಡೆ (30) ಅವರು ಫ್ಯಾಶನ್ ಬಳೆಗಳನ್ನು ಧರಿಸಿದ್ದನ್ನು ವಿರೋಧಿಸಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನ.13 ರಂದು, ದಂಪತಿಯ ಜಗಳದ ವೇಳೆ ಅತ್ತೆ ಕೂಡಾ ಜೊತೆ ಸೇರಿದ್ದು, ತನ್ನ ಕೂದಲನ್ನು ಎಳೆದು ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಪತಿ ತನ್ನನ್ನು ಬೆಲ್ಟ್ನಿಂದ ಥಳಿಸಿದ್ದಾನೆ, ಅವನ ಸಂಬಂಧಿ ಸ್ತ್ರೀ ಕೂಡ ತನ್ನನ್ನು ನೆಲಕ್ಕೆ ತಳ್ಳಿದ್ದಾಳೆ ಎಂದು ಯುವತಿ ಆರೋಪಿಸಿದ್ದಾಳೆ.
"ಘಟನೆಯ ನಂತರ, ಸಂತ್ರಸ್ತೆ ಪುಣೆಯಲ್ಲಿರುವ ತನ್ನ ಪೋಷಕರ ಮನೆಗೆ ಹೋಗಿ ಅಲ್ಲಿ ದೂರು ದಾಖಲಿಸಿದ್ದು, ನಂತರ ಅಲ್ಲಿಂದ ಪ್ರಕರಣವನ್ನು ನವಿ ಮುಂಬೈಗೆ ತನಿಖೆಗಾಗಿ ವರ್ಗಾಯಿಸಲಾಯಿತು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ