ಚುನಾವಣಾ ಟಿಕೆಟ್ ಗಾಗಿ ಬಹಿರಂಗವಾಗಿ ಪತ್ನಿಯನ್ನೇ ಅಸಮರ್ಥೆ ಎಂದ ಪತಿ!

PC | ndtv
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಟಿಕೆಟ್ ರೇಸ್ನಲ್ಲಿ ಪತಿ- ಪತ್ನಿಯರ ನಡುವೆಯೇ ಜಗಳ ನಡೆದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ.
ಈ ಹೋರಾಟ ಎಷ್ಟರ ಮಟ್ಟಿಗೆ ತೀವ್ರವಾಗಿದೆಯೆಂದರೆ ಪತಿಯೊಬ್ಬರು ತಮ್ಮ ಪತ್ನಿ ಅಸಮರ್ಥೆ ಎಂಬ ಬಹಿರಂಗ ಹೇಳಿಕೆ ನೀಡಿದ್ದಾರೆ. ಈಗಾಗಲೇ ಗಂಡಂದಿರು ಕಣಕ್ಕೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಇಬ್ಬರು ಹಾಲಿ ಶಾಸಕಿಯರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದೀಗ ಪುರುಷರು ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ರಾಷ್ಟ್ರೀಯ ಜನತಾದಳದ ಟಿಕೆಟ್ನಲ್ಲಿ ಗೆದ್ದು ಮೊಕಾಮಾ ಶಾಸಕಿಯಾಗಿದ್ದ ನೀಲಂ ದೇವಿಯವರ ಪತಿ ಅನಂತ್ ಸಿಂಗ್, ಆಡಳಿತಾರೂಢ ಸಂಯುಕ್ತ ಜನತಾದಳದ ಹುರಿಯಾಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅನಂತ್ ಸಿಂಗ್ 2020ರ ಚುನಾವಣೆಯಲ್ಲಿ ಆರ್ಜೆಡಿ ಟಿಕೆಟ್ ಮೇಲೆ ಗೆದ್ದಿದ್ದರು. ಆದರೆ ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲುಪಾಲಾದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದಾಗಿತ್ತು. ಉಪಚುನಾವಣೆಯಲ್ಲಿ ಅವರ ಪತ್ನಿ ಶಾಸಕಿಯಾದರು.
ಜೈಲಿನಿಂದ ಬಿಡುಗಡೆಯಾದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಅನಂತ್ ಸಿಂಗ್ ವ್ಯಕ್ತಪಡಿಸಿದರು. ಪತ್ನಿ ಕ್ಷೇತ್ರಕ್ಕೆ ಭೇಟಿಯನ್ನೂ ನೀಡುತ್ತಿಲ್ಲ ಹಾಗೂ ಜನರಿಗೆ ಆಕೆಯ ಬಗ್ಗೆ ತೃಪ್ತಿ ಇಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು.
ಅಂತೆಯೇ ಗೌರಬರಾಮ್ನಲ್ಲಿ ಶಾಸಕಿ ಸ್ವರ್ಣ ಸಿಂಗ್ ಅವರ ಕ್ಷೇತ್ರದಲ್ಲಿ ಅವರ ಪತಿ ಸುಜಿತ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಕಂದಾಯ ಸೇವೆ ಅಧಿಕಾರಿಯಾಗಿರುವ ಸುಜಿತ್ ಸಿಂಗ್ ಬಿಜೆಪಿ ಸೇರಿದ ಮರುದಿನವೇ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಅವರ ತಂದೆ ಸುನೀಲ್ ಕುಮಾರ್ ವಿಧಾನ ಪರಿಷತ್ನ ಮಾಜಿ ಸದಸ್ಯ.
2020ರ ವಿಧಾನಸಭಾ ಚುನಾವಣೆಯಲ್ಲಿ ಸ್ವರ್ಣ ಸಿಂಗ್ ಅವರು ಗೌರಬ್ರಾಮ್ ಕ್ಷೇತ್ರದಿಂದ ವಿಕಾಸಶೀಲ ಇಸಾನ್ ಪಾರ್ಟಿ ಟಿಕೆಟ್ನಲ್ಲಿ 7,000 ಮತಗಳ ಅಂತರದಲ್ಲಿ ಗೆದ್ದಿದ್ದರು.







