Hyderabad | ಐಐಟಿ ವಿದ್ಯಾರ್ಥಿಗೆ 2.5 ಕೋಟಿ ರೂ. ವೇತನದ ಆಫರ್

ಎಡ್ವರ್ಡ್ ನಾಥನ್ ವರ್ಗೀಸ್ | Photo Credit : NDTV
ಹೊಸದಿಲ್ಲಿ, ಜ. 2: ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿ ಎಡ್ವರ್ಡ್ ನಾಥನ್ ವರ್ಗೀಸ್ (21) ಅವರು 2.5 ಕೋಟಿ ರೂ.ಗಳ ವಾರ್ಷಿಕ ವೇತನದ ಅದ್ಭುತ ಪ್ಯಾಕೇಜ್ ಪಡೆದು ಐಐಟಿ ಹೈದರಾಬಾದ್ ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇದು ಸಂಸ್ಥೆ 2008ರಲ್ಲಿ ಸ್ಥಾಪನೆಯಾದ ಬಳಿಕ ಸ್ವೀಕರಿಸಿರುವ ಅತ್ಯಂತ ದೊಡ್ಡ ಪ್ಯಾಕೇಜ್ ಆಗಿದೆ. ನೆದರ್ಲ್ಯಾಂಡ್ಸ್ನ ಜಾಗತಿಕ ಟ್ರೇಡಿಂಗ್ ಕಂಪೆನಿ ಆಪ್ಟಿವರ್ ಈ ಆಫರ್ ನೀಡಿದೆ.
ಎಡ್ವರ್ಡ್ ಜುಲೈನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಂಪೆನಿಯನ್ನು ಸೇರಿಕೊಳ್ಳಲಿದ್ದಾರೆ. ಆಪ್ಟಿವರ್ನಲ್ಲಿ ಎರಡು ತಿಂಗಳ ಬೇಸಿಗೆ ಇಂಟರ್ನ್ಶಿಪ್ ಪೂರ್ಣಗೊಳಿಸಿ ಪೂರ್ವ ನೇಮಕಾತಿ ಆಫರ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಇದರಿಂದ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದ ಇನ್ನೊಬ್ಬ ವಿದ್ಯಾರ್ಥಿಯನ್ನು ಹಿಂದಿಕ್ಕಿದ್ದಾರೆ.
ತಮ್ಮ ಯಶಸ್ಸಿಗೆ ಐಐಟಿ ಟ್ಯಾಗ್, ಅನುಕೂಲಕರ ಶೈಕ್ಷಣಿಕ ಪಠ್ಯಕ್ರಮ ಹಾಗೂ ಇಂಜಿನಿಯರಿಂಗ್ನ ಮೊದಲ ವರ್ಷದಿಂದಲೇ ಕೋಡಿಂಗ್ ಮತ್ತು ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ ಮೇಲೆ ಗಮನ ಕೇಂದ್ರೀಕರಿಸಿದ್ದೇ ಕಾರಣ ಎಂದು ವರ್ಗೀಸ್ ತಿಳಿಸಿದ್ದಾರೆ.
ಪೂರ್ವ ನೇಮಕಾತಿ ಪ್ರಕ್ರಿಯೆಯಲ್ಲಿ ತಾವು ಸಂದರ್ಶನ ನೀಡಿದ್ದ ಮೊದಲ ಹಾಗೂ ಏಕೈಕ ಕಂಪೆನಿ ಆಪ್ಟಿವರ್ ಆಗಿತ್ತು ಎಂದು ವರ್ಗೀಸ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಹೈದರಾಬಾದ್ ನಲ್ಲಿ ಹುಟ್ಟಿ ಬೆಳೆದ ವರ್ಗೀಸ್, ಏಳರಿಂದ 12ನೇ ತರಗತಿವರೆಗೆ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದರು. 2022ರಲ್ಲಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 1100ನೇ ರ್ಯಾಂಕ್ ಹಾಗೂ ಜೆಇಇ ಅಡ್ವಾನ್ಸ್ಡ್ನಲ್ಲಿ 558ನೇ ರ್ಯಾಂಕ್ ಗಳಿಸಿದ್ದರು. 2025ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ)ಯಲ್ಲಿ ಶೇ. 99.96 ಅಂಕಗಳೊಂದಿಗೆ 120ನೇ ರ್ಯಾಂಕ್ ಪಡೆದಿದ್ದರು.
ಎಡ್ವರ್ಡ್ ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವರು ಐಐಟಿ ಹೈದರಾಬಾದ್ ನ ವೃತ್ತಿಜೀವನ ಸೇವೆಗಳ ಕಚೇರಿಯ ಮುಖ್ಯಸ್ಥರಾಗಿದ್ದು, ಪ್ಲೇಸ್ಮೆಂಟ್ ಮತ್ತು ಇಂಟರ್ನ್ಶಿಪ್ಗಳಿಗೆ ಸಂಬಂಧಿಸಿದ ವಿವಿಧ ಸೆಲ್ಗಳ ಎಂಟು ವಿದ್ಯಾರ್ಥಿ ಮ್ಯಾನೇಜರ್ ಗಳು ಹಾಗೂ 250 ಸಂಯೋಜಕರ ತಂಡವನ್ನು ಮುನ್ನಡೆಸಿದ್ದಾರೆ. ಅದಕ್ಕೂ ಮುನ್ನ ಸುಮಾರು 11 ತಿಂಗಳುಗಳ ಕಾಲ ಇಂಟರ್ನ್ಶಿಪ್ ಸೆಲ್ ನ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.







