ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ; ಆಗಸದ ಮಧ್ಯೆ ಮಾರ್ಗ ಬದಲಿಸಿದ ಇಂಡಿಗೋ ವಿಮಾನ

ಇಂಡಿಗೋ ವಿಮಾನ | Photo Credit : PTI
ಹೈದರಾಬಾದ್,ನ.1: ಜಿದ್ದಾದಿಂದ ಹೈದರಾಬಾದ್ಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ‘ಮಾನವ ಬಾಂಬ್’ ಇದೆ ಎಂಬ ಬೆದರಿಕೆ ಇಮೇಲ್ ಬಂದ ನಂತರ ಶನಿವಾರ ಇಲ್ಲಿಯ ರಾಜೀವ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತಾ ಎಚ್ಚರಿಕೆಯನ್ನು ಘೋಷಿಸಲಾಗಿತ್ತು. ಅಧಿಕಾರಿಗಳು ಆಗಸದ ಮಧ್ಯೆಯೇ ಇಂಡಿಗೋ ವಿಮಾನದ ಮಾರ್ಗವನ್ನು ಬದಲಿಸಿದ್ದು, ಅದು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಯಿತು.
ಶನಿವಾರ ನಸುಕಿನ 5:25ರ ಸುಮಾರಿಗೆ ಕಳುಹಿಸಲಾಗಿದ್ದ ಇಮೇಲ್ ನಲ್ಲಿ ಎಲ್ಟಿಟಿಇ-ಐಎಸ್ಐ ಉಗ್ರರು 1984ರ ಮದ್ರಾಸ್(ಈಗ ಚೆನ್ನೈ) ವಿಮಾನ ನಿಲ್ದಾಣ ಸ್ಫೋಟದಂತಹ ದೊಡ್ಡ ಪ್ರಮಾಣದ ದಾಳಿಯನ್ನು ಯೋಜಿಸುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಮುನ್ನೆಚ್ಚರಿಕೆ ಕ್ರಮಗಳಿಗೆ ಚಾಲನೆ ನೀಡಿದ್ದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಅಧಿಕಾರಿಗಳ ಪ್ರಕಾರ ಪಪೈತಾ ರಾಜನ್ ಎಂಬ ವ್ಯಕ್ತಿಯೊಂದಿಗೆ ಗುರುತಿಸಿಕೊಂಡ ವಿಳಾಸದಿಂದ ವಿಮಾನ ನಿಲ್ದಾಣದ ಕಸ್ಟಮರ್ ಸಪೋರ್ಟ್ಗೆ ಇಮೇಲ್ ರವಾನಿಸಲಾಗಿದ್ದು, ವಿಷಯ ಶೀರ್ಷಿಕೆಯಲ್ಲಿ ಹೈದರಾಬಾದ್ ನಲ್ಲಿ ಇಂಡಿಗೋ 68 ಯಾನ ಇಳಿಯುವುದನ್ನು ತಡೆಯುವಂತೆ ಸೂಚಿಸಲಾಗಿತ್ತು.
ವಿಮಾನದಲ್ಲಿ ಎಲ್ಟಿಟಿಇ-ಐಎಸ್ಐ ಉಗ್ರರಿದ್ದಾರೆ. ಮದ್ರಾಸ್ ವಿಮಾನ ನಿಲ್ದಾಣ ದಾಳಿಯ ಮಾದರಿಯಲ್ಲೇ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ದಾಳಿಗೆ ಅವರು ಯೋಜಿಸಿದ್ದಾರೆ. ವಿಮಾನದ ಮುಖ್ಯ ಬಾಡಿ ಮತ್ತು ಇಂಧನ ಟ್ಯಾಂಕ್ ಗಳಿಗೆ ಮೈಕ್ರೋಬಾಟ್ ಗಳನ್ನು ಅಳವಡಿಸಲಾಗಿದೆ ಎಂದು ಇಮೇಲ್ ನಲ್ಲಿ ಎಚ್ಚರಿಕೆ ನೀಡಲಾಗಿತ್ತು.
ಇಮೇಲ್ ಸ್ವೀಕರಿಸಿದ ನಿಮಿಷಗಳಲ್ಲೇ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯು ವರ್ಚುವಲ್ ಆಗಿ ಸಭೆ ಸೇರಿತ್ತು ಮತ್ತು ಬೆದರಿಕೆಯನ್ನು ಪರಿಶೀಲಿಸಿದ ಬಳಿಕ ಅದನ್ನು ‘ನಿರ್ದಿಷ್ಟ’ ಎಂದು ವರ್ಗೀಕರಿಸಲಾಗಿತ್ತು.
ಬಳಿಕ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿತ್ತು. ಅಲ್ಲಿ ವಿಮಾನವು ಸುರಕ್ಷಿತವಾಗಿ ಇಳಿದ ಬಳಿಕ ಅದನ್ನು ಸಮಗ್ರ ತಪಾಸಣೆಗೆ ಒಳಪಡಿಸಲಾಗಿದ್ದು, ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ದೂರಿನ ಆಧಾರದಲ್ಲಿ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







