ಮುಂಬೈ ಸರಣಿ ಸ್ಫೋಟ | ತನಿಖಾಧಿಕಾರಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವುದೇ?: ಸಂಸದ ಅಸದುದ್ದೀನ್ ಉವೈಸಿ

ಅಸಾದುದ್ದೀನ್ ಉವೈಸಿ |PC : PTI
ಹೊಸದಿಲ್ಲಿ,ಜು.21: ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವಾಗ, 189 ಜನರ ಸಾವಿಗೆ ಕಾರಣವಾದ ಸರಣಿ ರೈಲು ಬಾಂಬ್ ಸ್ಫೋಟದ ತನಿಖೆ ನಡೆಸಿದ ತನಿಖಾಧಿಕಾರಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತದೆಯೇ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಪ್ರಶ್ನಿಸಿದ್ಧಾರೆ.
2006ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. 12 ಮಂದಿ ಮುಸ್ಲಿಮರು, ಅವರು ಎಸಗದ ಅಪರಾಧಕ್ಕಾಗಿ 18 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಅವರು ಹೇಳಿದ್ದಾರೆ. 18 ವರ್ಷಗಳ ಕಾಲ ಜೈಲಿನಲ್ಲಿದ್ದವರೆಲ್ಲರ ಬದುಕಿನ ಬಹುಭಾಗ ಕಳೆದುಹೋಗಿದೆ. ಇನ್ನೊಂದೆಡೆ, 180 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಅವರ ಪಾಲಿಗೆ ಯಾವುದೇ ನ್ಯಾಯ ಸಿಗದಂತಾಗಿದೆ. ಈ ಪ್ರಕರಣದ ತನಿಖಾಧಿಕಾರಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತದೆಯೇ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ಈ ಪ್ರಕರಣದಲ್ಲಿ ಅಮಾಯಕರನ್ನು ಜೈಲಿಗೆ ಕಳುಹಿಸಲಾಗುತ್ತದೆ ಮತ್ತು ವರ್ಷಗಳ ನಂತರ ಅವರು ಜೈಲಿನಿಂದ ಬಿಡುಗಡೆಯಾದಾಗ ಅವರು ತಮ್ಮ ಬದುಕು ಕಟ್ಟಿಕೊಳ್ಳುವ ಯಾವುದೇ ಸಾಧ್ಯತೆ ಇರುವುದಿಲ್ಲ ಎಂದು ಉವೈಸಿ ಹೇಳಿದ್ದಾರೆ.ಇಂಥ ಅನೇಕ ಭಯೋತ್ಪಾದನಾ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ದಯನೀಯವಾಗಿ ವಿಫಲವಾಗಿವೆ ಎಂದು ಅವರು ಟೀಕಿಸಿದ್ಧಾರೆ.
ಸೋಮವಾರ ಖುಲಾಸೆಗೊಂಡವರಲ್ಲಿ ಇಬ್ಬರು ಜೈಲಿನಲ್ಲಿದ್ದಾಗ ತಮ್ಮ ಪೋಷಕರನ್ನು, ಇನ್ನೊಬ್ಬರು ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದಾರೆಂದು ಉವೈಸಿ ನೋವಿನಿಂದ ನೆನಪು ಮಾಡಿಕೊಂಡಿದ್ದಾರೆ.







