ಪ್ರಧಾನಿ ತಾಯಿಗೆ ನಿಂದನೆ ವಿವಾದ | ನಾನು ಶಿವಭಕ್ತ, ವಿಷವನ್ನು ನುಂಗುತ್ತೇನೆ : ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ (PTI)
ಗುವಾಹಟಿ,ಸೆ.14: ಕಾಂಗ್ರೆಸ್ ವಿರುದ್ಧ ರವಿವಾರ ಇಲ್ಲಿ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು,ಜನರು ತನ್ನ ಯಜಮಾನರು ಮತ್ತು ‘ರಿಮೋಟ್ ಕಂಟ್ರೋಲ್’ ಆಗಿದ್ದಾರೆ, ತಾನು ಅವರ ಮುಂದೆಯೇ ನೋವು ತೋಡಿಕೊಳ್ಳುತ್ತೇನೆ ಎಂದು ಹೇಳಿದರು.
ತನ್ನನ್ನು ಮತ್ತು ತನ್ನ ದಿವಂಗತ ತಾಯಿ ಹೀರಾಬೆನ್ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮೌಖಿಕ ನಿಂದನೆಗಳ ಕುರಿತು ಭಾರೀ ವಿವಾದದ ನಡುವೆಯೇ ಅವರು,ತಾನು ಶಿವನ ಭಕ್ತನಾಗಿದ್ದೇನೆ ಮತ್ತು ನಿಂದನೆಗಳ ‘ವಿಷವನ್ನು ನುಂಗುತ್ತೇನೆ’ ಎಂದರು.
ಅಸ್ಸಾಮಿನಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ದರಾಂಗ್ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ನನಗೆ ಗೊತ್ತಿದೆ,ಇಡೀ ಕಾಂಗ್ರೆಸ್ ಪಕ್ಷವು ನನ್ನನ್ನು ಗುರಿಯಾಗಿಸಿಕೊಳ್ಳುತ್ತದೆ ಮತ್ತು ಮೋದಿ ಮತ್ತೆ ಅಳುತ್ತಿದ್ದಾರೆ ಎಂದು ಹೇಳುತ್ತದೆ. ಜನರೇ ನನ್ನ ದೇವರು;ನಾನು ಅವರ ಮುಂದೆ ನನ್ನ ನೋವನ್ನು ತೋಡಿಕೊಳ್ಳದೆ ಇನ್ನೆಲ್ಲಿ ಅದನ್ನು ಮಾಡಲಿ? ಅವರು ನನ್ನ ಯಜಮಾನರು,ನನ್ನ ದೇವರು ಮತ್ತು ನನ್ನ ರಿಮೋಟ್ ಕಂಟ್ರೋಲ್ ಆಗಿದ್ದಾರೆ. ನಾನು ಇತರ ಯಾವುದೇ ರಿಮೋಟ್ ಕಂಟ್ರೋಲ್ ಹೊಂದಿಲ್ಲ’ ಎಂದು ಹೇಳಿದರು.
ಬಿಹಾರದಲ್ಲಿ ಇತ್ತೀಚಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆರ್ಜೆಡಿ-ಕಾಂಗ್ರೆಸ್ ವೇದಿಕೆಯಿಂದ ತನ್ನ ವಿರುದ್ಧ ಮೌಖಿಕ ನಿಂದನೆಗಳಿಗಾಗಿ ಪ್ರಧಾನಿ ಕಾಂಗ್ರೆಸ್ ನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ನಿಂದನೆಗಳು ಕೇಳಿ ಬಂದಾಗ ತನ್ನ ಯಾವುದೇ ನಾಯಕರು ವೇದಿಕೆಯ ಮೇಲಿರಲಿಲ್ಲ ಎಂದು ಕಾಂಗ್ರೆಸ್ ಒತ್ತಿ ಹೇಳಿದೆ. ನಂತರ ಕಾಂಗ್ರೆಸ್ ಪ್ರಧಾನಿಯವರ ತಾಯಿಯನ್ನು ಒಳಗೊಂಡ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವೀಡಿಯೊವನ್ನು ಸೃಷ್ಟಿಸಿದ್ದ ಕುರಿತು ವಿವಾದ ಭುಗಿಲೆದ್ದಿದೆ.
ಮೋದಿಯವರ ಭಾಷಣದಲ್ಲಿ ರಿಮೋಟ್ ಕಂಟ್ರೋಲ್ ಉಲ್ಲೇಖ ಮಹತ್ವದ್ದಾಗಿದೆ. ಈ ಹಿಂದೆ ಮೋದಿಯವರು ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಲು ಈ ಅಭಿವ್ಯಕ್ತಿಯನ್ನು ಬಳಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಗಾಂಧಿಗಳು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದು,ಕಾಂಗ್ರೆಸ್ ಅದನ್ನು ಪದೇ ಪದೇ ತಳ್ಳಿಹಾಕಿದೆ.







