"ಯಾರಿಗೂ ನೋವನ್ನುಂಟುಮಾಡಲು ಬಯಸಿರಲಿಲ್ಲ": ಬಾಲಿವುಡ್ ಬಗ್ಗೆ ನೀಡಿದ್ದ ಹೇಳಿಕೆಗೆ ಎ.ಆರ್.ರೆಹಮಾನ್ ಸ್ಪಷ್ಟನೆ

ಎ.ಆರ್.ರೆಹಮಾನ್|Photo: PTI
ಹೊಸದಿಲ್ಲಿ,ಜ.18: ಕಳೆದ ಎಂಟು ವರ್ಷಗಳಲ್ಲಿ ಹಿಂದಿ ಚಿತ್ರೋದ್ಯಮದಲ್ಲಿ ಸಂಭಾವ್ಯ ‘ಕೋಮು’ ಪಕ್ಷಪಾತ ಬಗೆಗಿನ ತನ್ನ ಹೇಳಿಕೆ ಕುರಿತು ಟೀಕೆಗಳಿಗೆ ರವಿವಾರ ಉತ್ತರಿಸಿರುವ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಯಾರದೇ ಭಾವನೆಗಳಿಗೆ ನೋವನ್ನುಂಟುಮಾಡಲು ತಾನೆಂದಿಗೂ ಉದ್ದೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದರೆ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಯಾವಾಗಲೂ ನನ್ನ ಉದ್ದೇಶವಾಗಿದೆ. ನಾನು ಎಂದಿಗೂ ಯಾರನ್ನೂ ನೋಯಿಸಲು ಬಯಸಿರಲಿಲ್ಲ ಮತ್ತು ನನ್ನ ಪ್ರಾಮಾಣಿಕತೆ ಟೀಕಾಕಾರರಿಗೆ ಅರ್ಥವಾಗುತ್ತದೆ ಎಂದು ಆಶಿಸಿದ್ದೇನೆ ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ರೆಹಮಾನ್ ಹೇಳಿದ್ದಾರೆ.
‘ನಾನು ಭಾರತೀಯನಾಗಿರುವುದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಏಕೆಂದರೆ ನನ್ನ ದೇಶವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತು ಬಹುಸಂಸ್ಕೃತಿಗಳ ಆಚರಣೆಗೆ ಅವಕಾಶ ನೀಡುತ್ತದೆ’ ಎಂದು ಹೇಳಿದ್ದಾರೆ.
ಇತ್ತೀಚಿಗೆ ಬಿಬಿಸಿ ಏಷ್ಯನ್ ನೆಟ್ವರ್ಕ್ಗೆ ನೀಡಿದ್ದ ಸಂದರ್ಶನದಲ್ಲಿ ರೆಹಮಾನ್ ಕಳೆದ ಎಂಟು ವರ್ಷಗಳಲ್ಲಿ ತನಗೆ ಚಲನಚಿತ್ರಗಳಲ್ಲಿ ಅವಕಾಶಗಳು ಸಿಗದ್ದನ್ನು ಪ್ರಸ್ತಾವಿಸಿ, ಹಿಂದಿ ಚಲನಚಿತ್ರೋದ್ಯಮ ಬದಲಾಗಿದೆ. ಅದಕ್ಕೆ ಅಧಿಕಾರದಲ್ಲಿ ಬದಲಾವಣೆ ಮತ್ತು ಬಹುಶಃ ‘ಕೋಮು ವಿಷಯ’ವು ಕಾರಣವಾಗಿರಬಹುದು ಎಂದು ಹೇಳಿದ್ದರು.
ರೆಹಮಾನ್ ಹೇಳಿಕೆಗಳು ರಾಜಕೀಯ ವಿವಾದವನ್ನು ಸೃಷ್ಟಿಸಿದ್ದವು. ಬಿಜೆಪಿ ಅವರ ಹೇಳಿಕೆಗಳನ್ನು ತಿರಸ್ಕರಿಸಿದ್ದರೆ ಪ್ರತಿಪಕ್ಷ ನಾಯಕರು ಕಳವಳ ವ್ಯಕ್ತಪಡಿಸಿದ್ದರು.







