Delhi - Air Pollution | ‘ದಿಲ್ಲಿಯಲ್ಲಿ ನನಗೆ ಅಲರ್ಜಿ ಉಂಟಾಗಿದೆ’: ವಾಯು ಮಾಲಿನ್ಯ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಕಳವಳ

ಕೇಂದ್ರ ಸಚಿವ ನಿತಿನ್ ಗಡ್ಕರಿ (PTI)
ಹೊಸದಿಲ್ಲಿ: ರಾಜಧಾನಿ ದಿಲ್ಲಿ–ಎನ್ಸಿಆರ್ನಲ್ಲಿ ಮುಂದುವರಿದಿರುವ ತೀವ್ರ ವಾಯುಮಾಲಿನ್ಯ ಪರಿಸ್ಥಿತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. “ನಾನು ದಿಲ್ಲಿಯಲ್ಲಿ ಮೂರು ದಿನಗಳಿಂದ ಇದ್ದೇನೆ. ಇಲ್ಲಿನ ಮಾಲಿನ್ಯದಿಂದ ನನಗೆ ಅಲರ್ಜಿ ಉಂಟಾಗಿದೆ” ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ಕೇಂದ್ರದ ಮಾಜಿ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ದಿಲ್ಲಿ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿನ ಮಾಲಿನ್ಯಕ್ಕೆ ಸಾರಿಗೆ ವಲಯವೇ ಪ್ರಮುಖ ಕಾರಣವಾಗಿದೆ ಎಂದು ಒಪ್ಪಿಕೊಂಡರು. “ನಾನು ಸಾರಿಗೆ ಸಚಿವ. ಇಲ್ಲಿ ಉಂಟಾಗುವ ಒಟ್ಟು ಮಾಲಿನ್ಯದ ಶೇ.40ರಷ್ಟು ಪಾಲು ವಾಹನಗಳಿಂದಲೇ ಬರುತ್ತದೆ” ಎಂದು ಅವರು ಉಲ್ಲೇಖಿಸಿದರು.
ಪಳೆಯುಳಿಕೆ ಇಂಧನಗಳ ಮೇಲಿನ ಅತಿಯಾದ ಅವಲಂಬನೆಯೇ ಮಾಲಿನ್ಯ ಹೆಚ್ಚಳಕ್ಕೆ ಮೂಲ ಕಾರಣ ಎಂದು ಹೇಳಿದ ಅವರು, ಪರಿಸರ ಸ್ನೇಹಿ ಪರ್ಯಾಯಗಳತ್ತ ತಕ್ಷಣದ ಗಮನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. “ಪಳೆಯುಳಿಕೆ ಇಂಧನಗಳು ಸೀಮಿತವಾಗಿವೆ. ಮಾಲಿನ್ಯ ಮಾತ್ರ ಹೆಚ್ಚುತ್ತಿದೆ. ವಿದ್ಯುತ್ ವಾಹನಗಳು ಹಾಗೂ ಹೈಡ್ರೋಜನ್ ಚಾಲಿತ ವಾಹನಗಳನ್ನು ನಾವು ಗಂಭೀರವಾಗಿ ಉತ್ತೇಜಿಸಬಾರದೇ?” ಎಂದು ಅವರು ಪ್ರಶ್ನಿಸಿದರು. ಭಾರತ ಪಳೆಯುಳಿಕೆ ಇಂಧನಗಳ ಆಮದಿಗೆ ವರ್ಷಕ್ಕೆ ಅಪಾರ ಮೊತ್ತ ಖರ್ಚು ಮಾಡುತ್ತಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಮಾಲಿನ್ಯ ಕಡಿತ ಹಾಗೂ ಇಂಧನ ಆಮದು ಅವಲಂಬನೆ ಇಳಿಸುವ ನಿಟ್ಟಿನಲ್ಲಿ, ಸಂಪೂರ್ಣವಾಗಿ ಎಥನಾಲ್ ನಿಂದ ಚಲಿಸುವ ತಮ್ಮ ಫ್ಲೆಕ್ಸ್–ಇಂಧನ ವಾಹನದ ಬಗ್ಗೆಯೂ ಗಡ್ಕರಿ ಪ್ರಸ್ತಾಪಿಸಿದರು. ಇಂತಹ ಪರ್ಯಾಯ ಇಂಧನಗಳು ಪರಿಸರಕ್ಕೂ ಆರ್ಥಿಕತೆಗೆ ಸಹ ಅನುಕೂಲಕರವಾಗಿವೆ ಎಂದು ಅವರು ಹೇಳಿದರು.
ಇದರ ನಡುವೆಯೇ, ಮಂಗಳವಾರ ದಿಲ್ಲಿಯ ವಾಯು ಗುಣಮಟ್ಟ ಮತ್ತೊಮ್ಮೆ ತೀವ್ರ ಹಂತಕ್ಕೆ ಕುಸಿದಿತ್ತು. 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 412 ದಾಖಲಾಗಿದ್ದು, ರಾಜಧಾನಿ ದೇಶದ ಎರಡನೇ ಅತ್ಯಂತ ಕಲುಷಿತ ನಗರ ಎಂದು ದಾಖಲಾಗಿತ್ತು. ಎನ್ಸಿಆರ್ ವ್ಯಾಪ್ತಿಯ ನೋಯ್ಡಾ ನಗರದಲ್ಲಿ ಸರಾಸರಿ AQI 426 ದಾಖಲಾಗಿದ್ದು, ದೇಶದ ಅತ್ಯಂತ ಕಲುಷಿತ ನಗರ ಎಂದು ಗುರುತಿಸಲ್ಪಟ್ಟಿತ್ತು. ಬುಧವಾರ ಬೆಳಿಗ್ಗೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ, ಮುಂದಿನ ಕೆಲ ದಿನಗಳವರೆಗೆ ಗಾಳಿಯ ಗುಣಮಟ್ಟ ‘ತುಂಬಾ ಕಳಪೆ’ ವರ್ಗದಲ್ಲೇ ಉಳಿಯುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ದಿಲ್ಲಿಯ ಮಾಲಿನ್ಯ ಕುರಿತು ಗಡ್ಕರಿ ಇದೇ ಮೊದಲ ಬಾರಿಗೆ ಕಳವಳ ವ್ಯಕ್ತಪಡಿಸಿರುವುದಲ್ಲ. ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, “ಪ್ರತಿ ಬಾರಿ ದಿಲ್ಲಿಗೆ ಬರಬೇಕಾದಾಗ ಹೋಗಬೇಕೇ ಬೇಡವೇ ಎಂದು ಯೋಚಿಸಬೇಕಾಗುತ್ತದೆ. ಅಷ್ಟು ಭಯಾನಕ ಮಾಲಿನ್ಯ ಇದೆ” ಎಂದು ಅವರು ಹೇಳಿದ್ದರು.







