ಉತ್ತರ ಪ್ರದೇಶ | ‘ಐ ಲವ್ ಮುಹಮ್ಮದ್’ ವಿವಾದ: ಶುಕ್ರವಾರದ ಪ್ರಾರ್ಥನೆಯ ನಂತರ ಮಸೀದಿಯ ಹೊರಗೆ ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆ

PC : PTI
ಬರೇಲಿ (ಉತ್ತರ ಪ್ರದೇಶ): ಸ್ಥಳೀಯ ಮುಸ್ಲಿಂ ವಿದ್ವಾಂಸ ಹಾಗೂ ಇತ್ತೆಹಾದ್ ಇ-ಮಿಲಾತ್ ಕೌನ್ಸಿಲ್ ನ ಮುಖ್ಯಸ್ಥ ಮೌಲಾನಾ ತೌಕೀರ್ ರಾಝಾ ಕರೆ ನೀಡಿದ ‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ ಬೆಂಬಲ ನೀಡಿ ಹಲವಾರು ಪ್ರತಿಭಟನಾಕಾರರು ಶುಕ್ರವಾರದ ಪ್ರಾರ್ಥನೆಯ ನಂತರ ಮಸೀದಿಯ ಹೊರಗೆ ನೆರೆದಿದ್ದರಿಂದ, ಪೊಲೀಸರು ಹಾಗೂ ಸ್ಥಳೀಯರ ನಡುವೆ ಘರ್ಷಣೆ ಸಂಭವಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಪ್ರತಿಭಟನೆಗೆ ಸ್ಥಳೀಯ ಪ್ರಾಧಿಕಾರಗಳು ಅನುಮತಿ ನೀಡಲು ಕೊನೆಯ ಕ್ಷಣದಲ್ಲಿ ನಿರಾಕರಿಸಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಶುಕ್ರವಾರದ ಪ್ರಾರ್ಥನೆಯ ನಂತರ ಮಸೀದಿಯ ಬಳಿ ಹಾಗೂ ಕೊತ್ವಾಲಿ ಪ್ರದೇಶಗಳೆರಡಲ್ಲೂ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಅವಲೋಕಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೂ, ಸ್ಥಳೀಯರು ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವ ದೃಶ್ಯಗಳು ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬಂದಿವೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವಿನಾಶ್ ಸಿಂಗ್, “ಸದ್ಯ ಪರಿಸ್ಥಿತಿ ಸಹಜವಾಗಿದ್ದು, ನಿಯಂತ್ರಣದಲ್ಲಿದೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ನಾವು ಜನರಿಗೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 4ರಂದು ನಡೆದಿದ್ದ ಬರಾವಾಫತ್ ಮೆರವಣಿಗೆಯ ವೇಳೆ ಕಾನ್ಪುರದ ಸಾರ್ವಜನಿಕ ರಸ್ತೆಯಲ್ಲಿ ‘ಐ ಲವ್ ಮುಹಮ್ಮದ್’ ಎಂಬ ಭಿತ್ತಿ ಫಲಕ ಹಾಕಿದ ಆರೋಪದ ಮೇಲೆ ಸೆಪ್ಟೆಂಬರ್ 9ರಂದು ಕಾನ್ಪುರ ಪೊಲೀಸರು ಒಂಭತ್ತು ಮಂದಿ ಹಾಗೂ 15 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರಿಂದ ಈ ವಿವಾದ ಭುಗಿಲೆದ್ದಿದೆ.







