I-PAC ದಾಳಿ ಪ್ರಕರಣ | ತನಿಖೆಗೆ ಅಡ್ಡಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ED; ಬಂಗಾಳ ಸರಕಾರದಿಂದ ಕೇವಿಯಟ್ ಅರ್ಜಿ ಸಲ್ಲಿಕೆ

ಮಮತಾ ಬ್ಯಾನರ್ಜಿ | Photo Credit : PTI
ಹೊಸದಿಲ್ಲಿ, ಜ.10: I-PAC ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಶನಿವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಇದೇ ವೇಳೆ, ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಾದವನ್ನು ಆಲಿಸದೆ ಯಾವುದೇ ಆದೇಶ ಹೊರಡಿಸದಂತೆ ಕೋರಿ ಪಶ್ಚಿಮ ಬಂಗಾಳ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದೆ.
ಸಂವಿಧಾನದ ವಿಧಿ 32ರಡಿ ಸಲ್ಲಿಸಿರುವ ಅರ್ಜಿಯಲ್ಲಿ ಇಡೀ ಘಟನಾವಳಿಯನ್ನು ವಿವರಿಸಿರುವ ED, ರಾಜ್ಯ ಸರಕಾರದ ಹಸ್ತಕ್ಷೇಪದಿಂದ ನ್ಯಾಯಯುತ ತನಿಖೆ ನಡೆಸುವ ತನ್ನ ಹಕ್ಕಿಗೆ ಧಕ್ಕೆಯುಂಟಾಗಿದೆ ಎಂದು ಹೇಳಿದೆ. ಈ ವಿಷಯದಲ್ಲಿ ಸಿಬಿಐ ತನಿಖೆಯನ್ನೂ ಅದು ಕೋರಿದೆ.
ಗುರುವಾರ ಕೋಲ್ಕತಾದಲ್ಲಿ ರಾಜಕೀಯ ಸಲಹಾ ಸಂಸ್ಥೆ I-PAC ಹಾಗೂ ಅದರ ನಿರ್ದೇಶಕ ಪ್ರತೀಕ್ ಜೈನ್ ವಿರುದ್ಧ ನಡೆಸಿದ ದಾಳಿಗಳಿಗೆ ಅಡ್ಡಿಯುಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ, ಮಮತಾ ಬ್ಯಾನರ್ಜಿ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇತರರ ಪಾತ್ರದ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ತನ್ನ ಅರ್ಜಿಗೆ ತುರ್ತು ವಿಚಾರಣೆ ನೀಡುವ ಮನವಿ ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ವಿಫಲವಾದ ಬಳಿಕ ED ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ಕಲಕತ್ತಾ ಹೈಕೋರ್ಟ್ ನಲ್ಲಿ ನಡೆದಿದ್ದೇನು?
ED ಹಾಗೂ ಟಿಎಂಸಿ ಪರಸ್ಪರರ ವಿರುದ್ಧ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಕೈಗೆತ್ತಿಕೊಳ್ಳಲು ಕಲಕತ್ತಾ ಉಚ್ಚ ನ್ಯಾಯಾಲಯ ನಿರ್ಧರಿಸಿತ್ತು. ಆದರೆ, ನ್ಯಾಯಾಲಯದ ಕೊಠಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಕೀಲರು, ಟಿಎಂಸಿ ಕಾರ್ಯಕರ್ತರು ಹಾಗೂ ಕುತೂಹಲಿಗಳು ಸೇರಿದ್ದರಿಂದ ವ್ಯಾಪಕ ಕೋಲಾಹಲ ಸೃಷ್ಟಿಯಾಯಿತು. ಶಾಂತಿ ಕಾಪಾಡುವಂತೆ ನ್ಯಾಯಮೂರ್ತಿ ಸುವ್ರಾ ಘೋಷ್ ಪದೇಪದೇ ಮಾಡಿದ ಮನವಿಗಳು ವಿಫಲವಾದ ಹಿನ್ನೆಲೆಯಲ್ಲಿ ಅವರು ವಿಚಾರಣೆಯನ್ನು ಜ.14ಕ್ಕೆ ಮುಂದೂಡಿದರು.
ಜೈನ್ ನಿವಾಸದಲ್ಲಿ ದಾಳಿ ನಡೆಸಿದ ವೇಳೆ ಮುಖ್ಯಮಂತ್ರಿಗಳು ತನ್ನ ವಶದಲ್ಲಿದ್ದ ಆಕ್ಷೇಪಾರ್ಹ ದಾಖಲೆಗಳನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ED ಆರೋಪಿಸಿದೆ. ಆದರೆ, ದಾಖಲೆಗಳು ಹಾಗೂ ದತ್ತಾಂಶಗಳು ತನ್ನ ಪಕ್ಷಕ್ಕೆ ಸಂಬಂಧಿಸಿದ್ದೇ ಎಂದು ಪ್ರತಿಪಾದಿಸಿರುವ ಮಮತಾ ಬ್ಯಾನರ್ಜಿ, ED ತನ್ನನ್ನು ಮತ್ತು ಟಿಎಂಸಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯ ಬಳಿಕ I-PAC, ಟಿಎಂಸಿಯೊಂದಿಗೆ ಕೈಜೋಡಿಸಿದೆ.







