I-PAC ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸದ ಮೇಲೆ ದಾಳಿ; ED ಅಧಿಕಾರಿಗಳ ಗುರುತು ಪತ್ತೆಗೆ ಪೊಲೀಸರ ಶೋಧ

ಪ್ರತೀಕ್ ಜೈನ್ | Photo Credit : @pratikjainipac
ಕೋಲ್ಕತಾ, ಜ. 13: ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ನ ಕಚೇರಿ ಹಾಗೂ ಅದರ ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಗುರುತನ್ನು ಕೋಲ್ಕತಾ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತೀಕ್ ಜೈನ್ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ಶೋಧ ಕಾರ್ಯಾಚರಣೆಯನ್ನು ಅವರು ನೋಡಿದ್ದಾರೆಯೇ ಅಥವಾ ಇಲ್ಲಿನ ಲೌಡೆನ್ ಸ್ಟ್ರೀಟ್ನಲ್ಲಿರುವ ಅವರ ನಿವಾಸವನ್ನು ಪ್ರವೇಶಿಸಿದ ರೀತಿಯನ್ನು ಖಚಿತಪಡಿಸಿಕೊಳ್ಳಲು ಜೈನ್ ಅವರ ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿ ಹಲವು ನಿವಾಸಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
“ಬೆಳಗ್ಗೆ ನಿವಾಸಿಗಳು ಹಾಗೂ ನೆರೆಹೊರೆಯವರು ಏನು ನೋಡಿದ್ದಾರೆ ಎಂಬುದನ್ನು ನಾವು ತಿಳಿಯಲು ಬಯಸಿದ್ದೇವೆ. ಘಟನೆಯ ಅನುಕ್ರಮವನ್ನು ತಿಳಿಯಲು ಅವರ ಹೇಳಿಕೆಗಳು ನಿರ್ಣಾಯಕ” ಎಂದು ಅವರು ಸೋಮವಾರ ತಿಳಿಸಿದ್ದಾರೆ.
“ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಹೆಸರುಗಳು ವಸತಿ ಸಂಕೀರ್ಣದ ಭದ್ರತಾ ನೋಂದಣಿಯಲ್ಲಿ ಕಂಡು ಬಂದಿಲ್ಲ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಮಾಣಿತ ಪ್ರವೇಶ ಕಾರ್ಯವಿಧಾನವನ್ನು ಅನುಸರಿಸದೆ, ಭದ್ರತಾ ಸಿಬ್ಬಂದಿಯನ್ನು ದೂಡಿಕೊಂಡು ವಸತಿ ಸಂಕೀರ್ಣದ ಆವರಣ ಪ್ರವೇಶಿಸಿದ್ದಾರೆ” ಎಂದು ಕೋಲ್ಕತಾದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಮೊಬೈಲ್ ಫೋನ್ಗಳನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.







