ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ : ಪ್ರಶಾಂತ್ ಕಿಶೋರ್ ಘೋಷಣೆ

ಪ್ರಶಾಂತ್ ಕಿಶೋರ್ (Photo: PTI)
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಚುನಾವಣಾ ತಂತ್ರಜ್ಞ, ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ.
ತನ್ನ ಸ್ಪರ್ಧೆ ಕುರಿತ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಪ್ರಶಾಂತ್ ಕಿಶೋರ್, ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆಡಳಿತರೂಢ NDAಗೆ ಸೋಲು ಖಚಿತ ಎಂದು ಹೇಳಿದ್ದಾರೆ.
ಪಿಟಿಐ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್, ಜನ್ ಸುರಾಜ್ ಪಕ್ಷಕ್ಕೆ 150 ಕ್ಕಿಂತ ಕಡಿಮೆ ಸ್ಥಾನಗಳು ಬಂದರೆ ಅದನ್ನು ಸೋಲು ಎಂದು ಪರಿಗಣಿಸಲಾಗುತ್ತದೆ. ಜನ್ ಸುರಾಜ್ ಪಕ್ಷ ಬಿಹಾರ ಚುನಾವಣೆಯಲ್ಲಿ ಗೆದ್ದರೆ ಅದು ರಾಷ್ಟ್ರವ್ಯಾಪಿ ಪರಿಣಾಮ ಬೀರುತ್ತದೆ. ರಾಷ್ಟ್ರ ರಾಜಕೀಯದ ದಿಕ್ಸೂಚಿ ಬದಲಾವಣೆಯಾಗಲಿದೆ ಎಂದು ಹೇಳಿದರು.
ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಪಕ್ಷವು ನಿರ್ಧರಿಸಿದೆ. ಆದ್ದರಿಂದ, ಪಕ್ಷವು ರಾಘೋಪುರದಿಂದ ತೇಜಸ್ವಿ ಯಾದವ್ ವಿರುದ್ಧ ಮತ್ತೊಬ್ಬ ಅಭ್ಯರ್ಥಿಯನ್ನು ಘೋಷಿಸಿದೆ. ಇದು ಪಕ್ಷದ ಹಿತದೃಷ್ಟಿಯಿಂದ ನಾವು ತೆಗೆದುಕೊಂಡ ನಿರ್ಧಾರ. ನಾನು ಸ್ಪರ್ಧಿಸಿದ್ದರೆ, ಅದು ಸಂಘಟನಾ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ನಾವು ಭರ್ಜರಿ ಗೆಲುವು ಸಾಧಿಸಬಹುದು ಅಥವಾ ಭಾರೀ ಸೋಲು ಅನುಭವಿಸಬಹುದು. ಈ ಎರಡರಲ್ಲಿ ಒಂದು ಸಂಭವಿಸಬಹುದು. 10ಕ್ಕಿಂತ ಕಡಿಮೆ ಸ್ಥಾನಗಳು ಅಥವಾ 150ಕ್ಕೂ ಹೆಚ್ಚು ಸ್ಥಾನಗಳನ್ನು ನಿರೀಕ್ಷಿಸುತ್ತೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.
ಬಿಹಾರ ಚುನಾವಣೆ ಎರಡು ಹಂತಗಳಲ್ಲಿ ನವೆಂಬರ್ 6 ಮತ್ತು ನವೆಂಬರ್ 11ರಂದು ನಡೆಯಲಿದ್ದು, ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.







