"ಒಂದು ತಿಂಗಳಲ್ಲಿ ಕದ್ದ ವಸ್ತುಗಳನ್ನು ಮರಳಿಸುವೆ": ಮನೆಗೆ ನುಗ್ಗಿ ನಗ-ನಗದು ಕಳವು ಮಾಡಿ ಕ್ಷಮಾಪಣಾ ಪತ್ರ ಬರೆದಿಟ್ಟ ಕಳ್ಳ!

ಸಾಂದರ್ಭಿಕ ಚಿತ್ರ
ಚೆನ್ನೈ: ನಿವೃತ್ತ ಶಿಕ್ಷಕರೊಬ್ಬರ ಮನೆಗೆ ನುಗ್ಗಿ ಕಳವು ನಗ-ನಗದು ಮಾಡಿದಾತ, ನಂತರ ಕ್ಷಮಾಪಣಾ ಪತ್ರ ಬರೆದಿಟ್ಟು ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕದ್ದ ವಸ್ತುಗಳನ್ನು ಮತ್ತೆ ಮರಳಿಸುವುದಾಗಿ ಆ ಕ್ಷಮಾಪಣಾ ಪತ್ರದಲ್ಲಿ ಹೇಳಲಾಗಿದೆ.
ಜೂನ್ 17ರಂದು ನಿವೃತ್ತ ಶಿಕ್ಷಕ ದಂಪತಿಗಳಾದ ಸೆಲ್ವಿನ್ ಹಾಗೂ ಅವರ ಪತ್ನಿ ಚೆನ್ನೈನಲ್ಲಿರುವ ತಮ್ಮ ಪುತ್ರನನ್ನು ಭೇಟಿ ಮಾಡಲು ತೆರಳಿದ್ದಾಗ ಈ ವಿಚಿತ್ರ ಘಟನೆ ನಡೆದಿದೆ. ಈ ಘಟನೆಯು ಮೆಗ್ನಾನಪುರಂನ ಸಂತಕುಳಂ ರಸ್ತೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಜೂನ್ 26ರಂದು ಸೆಲ್ವಿನ್ ದಂಪತಿಗಳ ನಿವಾಸದ ಬಳಿ ಮನೆಗೆಲಸದಾಕೆ ಸೆಲ್ವಿ ಬಂದಾಗ ಮನೆಯ ಪ್ರವೇಶದ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಇದರಿಂದ ಆಘಾತಕ್ಕೀಡಾಗಿರುವ ಸೆಲ್ವಿ, ತಕ್ಷಣವೇ ಸೆಲ್ವಿನ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ ಎಂದು ಹೇಳಲಾಗಿದೆ.
ಸೆಲ್ವಿನ್ ಮನೆಗೆ ಮರಳಿದಾಗ, ಮನೆಯ ಬೀರುವಿನಲ್ಲಿದ್ದ ರೂ. 60,000 ನಗದು, 12 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಒಂದು ಜೊತೆ ಬೆಳ್ಳಿ ಕಾಲುಂಗುರ ಕಳ್ಳತನವಾಗಿರುವುದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಮನೆಯ ಶೋಧ ಕಾರ್ಯ ಕೈಗೊಂಡಾಗ ಕಳವು ಮಾಡಿದ ವ್ಯಕ್ತಿ ಕ್ಷಮಾಪಣಾ ಪತ್ರ ಬರೆದು, ಅದರಲ್ಲಿ ಇನ್ನೊಂದು ತಿಂಗಳಲ್ಲಿ ಕಳವು ಮಾಡಿದ ವಸ್ತುಗಳನ್ನು ಮರಳಿಸುವ ಭರವಸೆ ನೀಡಿರುವುದು ಕಂಡು ಬಂದಿದೆ.
"ನನ್ನನ್ನು ಕ್ಷಮಿಸಿ, ನಾನು ಈ ವಸ್ತುಗಳನ್ನು ಇನ್ನು ಒಂದು ತಿಂಗಳಲ್ಲಿ ಮರಳಿಸುವೆ. ನಮ್ಮ ಮನೆಯಲ್ಲಿ ಒಬ್ಬರಿಗೆ ಹುಷಾರಿಲ್ಲದೆ ಇರುವುದರಿಂದ ನಾನು ಈ ಕೃತ್ಯ ಮಾಡುತ್ತಿದ್ದೇನೆ" ಎಂದು ಆ ಕ್ಷಮಾಪಣಾ ಪತ್ರದಲ್ಲಿ ಬರೆಯಲಾಗಿದೆ.
ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೆಗ್ನಾನಪುರಂ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಕಳೆದ ವರ್ಷ ಇಂತಹುದೇ ಘಟನೆಯೊಂದು ಕೇರಳದ ಪಾಲಕ್ಕಾಡ್ನಲ್ಲಿ ನಡೆದಿತ್ತು. ಮೂರು ವರ್ಷದ ಮಗುವಿನ ಚಿನ್ನದ ಸರವನ್ನು ಕದ್ದಿದ್ದ ಕಳ್ಳನೊಬ್ಬ, ಅದರ ಮಾರಾಟದಿಂದ ಬಂದಿದ್ದ ದುಡ್ಡಿನೊಂದಿಗೆ ಕ್ಷಮಾಪಣಾ ಅರ್ಜಿಯನ್ನೂ ಬರೆದು ಮರಳಿಸಿದ್ದ ಘಟನೆ ವರದಿಯಾಗಿತ್ತು.







