ಇನ್ನು ಮುಂದೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವುದಿಲ್ಲ: ಡೇವಿಡ್ ವಾರ್ನರ್

ಡೇವಿಡ್ ವಾರ್ನರ್ (Photo: PTI)
ಹೊಸದಿಲ್ಲಿ: ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಮಂದಿ ಮೃತಪಟ್ಟ ಬಳಿಕ ವಿಮಾನಯಾನ ಸಂಸ್ಥೆ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಏರ್ ಇಂಡಿಯಾ ಸಂಸ್ಥೆಯು ಸಿಬ್ಬಂದಿಗಳು ವಿಮಾನದ ಲೋಪಗಳ ಬಗ್ಗೆ ನೀಡಿದ ಎಚ್ಚರಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಈ ಬಗ್ಗೆ ಏರ್ ಇಂಡಿಯಾ ಸಂಸ್ಥೆಯನ್ನು ಟೀಕಿಸಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್, ಸುರಕ್ಷತಾ ಲೋಪಗಳ ಬಗ್ಗೆ ವಿಮಾನಯಾನ ಸಂಸ್ಥೆಯನ್ನು ಖಂಡಿಸಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ವಾರ್ನರ್ ಅವರು ಮಾಜಿ ಏರ್ ಇಂಡಿಯಾ ಸಿಬ್ಬಂದಿ ಬರೆದಿದ್ದಾರೆ ಎನ್ನಲಾದ ಕಾಮೆಂಟ್ನ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಅಪಘಾತಕ್ಕೀಡಾದ ವಿಮಾನವು ದೀರ್ಘಕಾಲದ ಯಾಂತ್ರಿಕ ಸಮಸ್ಯೆಗಳನ್ನು ಹೊಂದಿದೆ ಎಂದು ಆರೋಪಿಸಿದೆ.
ಅಲ್ಲದೆ, ಇನ್ನು ಮುಂದೆ ಎಂದಿಗೂ ಏರ್ ಇಂಡಿಯಾ ವಿಮಾನದಲ್ಲಿ ತಾವು ಪ್ರಯಾಣಿಸುವುದಿಲ್ಲ ಎಂದು ವಾರ್ನರ್ ಹೇಳಿದ್ದಾರೆ.







