ಅಸ್ಸಾಂ-ಅರುಣಾಚಲ ಗಡಿಯ ನದಿಯಲ್ಲಿ ಸಿಲುಕಿದ 14 ಮಂದಿಯ ರಕ್ಷಿಸಿದ ಐಎಎಫ್

ತೀನ್ಸುಕಿಯಾ: ಭಾರೀ ಮಳೆಯಿಂದಾಗಿ ಅಸ್ಸಾಂ-ಅರುಣಾಚಲ ಗಡಿಯಲ್ಲಿ ಉಕ್ಕಿ ಹರಿಯುತ್ತಿರುವ ಬೊಮ್ಜಿರ್ ನದಿಯಲ್ಲಿ ಸಿಲುಕಿದ್ದ 14 ಮಂದಿಯನ್ನು ಭಾರತೀಯ ವಾಯು ಪಡೆ (ಐಎಎಫ್)ಯ ಸಿಬ್ಬಂದಿ ರವಿವಾರ ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಮನವಿಯ ಹಿನ್ನೆಲೆಯಲ್ಲಿ ಮುಂಜಾನೆ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ತೀನ್ಸುಕಿಯಾ ಜಿಲ್ಲಾಧಿಕಾರಿ ಸ್ವಪ್ನೀಲ್ ಪೌಲ್ ಅವರು ಹೇಳಿದ್ದಾರೆ.
‘‘ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಉಕ್ಕಿ ಹರಿಯುತ್ತಿರುವ ಬೊಮ್ಜಿರ್ ನದಿಯಲ್ಲಿ ಸಿಲುಕಿದ್ದ 14 ಮಂದಿಯನ್ನು ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ’’ ಎಂದು ಪೌಲ್ ತಿಳಿಸಿದ್ದಾರೆ.
‘‘ಈ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಇವರು ಸಿಲುಕಿಕೊಂಡಿದ್ದರು. ರಕ್ಷಣಾ ಯೋಜನೆಯನ್ನು ಕಾರ್ಯಗತಗೊಳಿಸಲು ಜಿಲ್ಲಾಡಳಿತ ಕೂಡಲೇ ಭಾರತೀಯ ವಾಯು ಪಡೆ ಹಾಗೂ ಅರುಣಾಚಲಪ್ರದೇಶದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿತು’’ ಎಂದು ಅವರು ತಿಳಿಸಿದ್ದಾರೆ.
ಸಾದಿಯಾ ಕಂದಾಯ ಸರ್ಕಲ್ ಅಧಿಕಾರಿ ಜಯದೀಪ್ ರಾಜಕ್ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದರು. ತೀನ್ಸುಕಿಯಾ ಜಿಲ್ಲೆಯಿಂದ 13 ಮಂದಿ ಹಾಗೂ ಅರುಣಾಚಲಪ್ರದೇಶದಿಂದ ಒಬ್ಬರನ್ನು ರಕ್ಷಿಸಲಾಯಿತು.
ಎಲ್ಲಾ 14 ಮಂದಿಯನ್ನು ಅವರವರ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







