ಮಾರ್ಚ್ 26ರೊಳಗೆ IAF ಗೆ ಆರು LCA ತೇಜಸ್ ಪೂರೈಕೆ: ಎಚ್ಎಎಲ್ ಸಿಎಂಡಿ

Photo : theweek
ಹೊಸದಿಲ್ಲಿ: ಭಾರತೀಯ ವಾಯುಪಡೆ(ಐಎಎಎಫ್)ಯು ಮಾರ್ಚ್ 2026ರೊಳಗೆ ಕನಿಷ್ಠ ಆರು ತೇಜಸ್ ಲಘು ಯುದ್ಧ ವಿಮಾನ(ಎಲ್ಸಿಎ)ಗಳನ್ನು ಪಡೆಯಲಿದೆ ಎಂದು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ತಯಾರಿಸುವ ಹಿಂದುಸ್ಥಾನ ಏರೋನಾಟಿಕ್ಸ್ ಲಿ.(ಎಚ್ಎಎಲ್)ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಡಿ.ಕೆ.ಸುನಿಲ್ ತಿಳಿಸಿದ್ದಾರೆ.
ಜಿಇ ಏರೋಸ್ಪೇಸ್ ತನ್ನ ಇಂಜಿನ್ಗಳ ಪೂರೈಕೆಯಲ್ಲಿ ಗಡುವು ತಪ್ಪಿದ್ದು ಐಎಎಫ್ಗೆ ವಿಮಾನಗಳ ವಿತರಣೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಇ ಏರೋಸ್ಪೇಸ್ 12 ಇಂಜಿನ್ಗಳನ್ನು ಪೂರೈಸುವ ನಿರೀಕ್ಷೆಯಿದೆ. ಇದು ಐಎಎಫ್ಗೆ ಜೆಟ್ ವಿಮಾನಗಳ ಪೂರೈಕೆಯನ್ನು ತ್ವರಿತಗೊಳಿಸಲಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸುನಿಲ್ ತಿಳಿಸಿದರು.
‘ಯಾವುದೇ ಕಂಪನಿಯು ಟೀಕೆಗಳಿಂದ ಹೊರತಲ್ಲ,ಅದು ಸಹಜ. ದುರದೃಷ್ಟವಶಾತ್ ಎಲ್ಸಿಎ ಮಾರ್ಕ್-1ಎ ಪ್ರಕರಣದಲ್ಲಿಯೂ ಇದು ಸಂಭವಿಸಿದೆ,ನಾವು ವಿಮಾನವನ್ನು ನಿರ್ಮಿಸಿದ್ದೇವೆ,ಇಂದು ಆರು ವಿಮಾನಗಳು ಸಾಲುಗಟ್ಟಿ ನಿಂತಿವೆ. ಆದರೆ ಜಿಇ ಏರೋಸ್ಪೇಸ್ನಿಂದ ಇಂಜಿನ್ಗಳ ಪೂರೈಕೆಯಾಗಿಲ್ಲ. ಅದು 2023ರಲ್ಲಿಯೇ ಇಂಜಿನ್ಗಳನ್ನು ಪೂರೈಸಬೇಕಿತ್ತು,ಆದರೆ ಈವರೆಗೆ ನಮಗೆ ಲಭ್ಯವಾಗಿರುವುದು ಒಂದು ಇಂಜಿನ್ ಮಾತ್ರ’ ಎಂದರು.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಉತ್ಪಾದನೆಗೆ ಹಿನ್ನಡೆಯಾಗಿದ್ದರಿಂದ ಮತ್ತು ನಂತರ ಅನೇಕ ಹಿರಿಯ ಇಂಜಿನಿಯರ್ಗಳು ಕಂಪನಿಯಿಂದ ನಿರ್ಗಮಿಸಿದ್ದರಿಂದ ಸಕಾಲದಲ್ಲಿ ಇಂಜಿನ್ಗಳನ್ನು ಪೂರೈಸಲು ಜಿಇ ಏರೋಸ್ಪೇಸ್ಗೆ ಸಾಧ್ಯವಾಗಿಲ್ಲ.
‘ಜಿಇ ಏರೋಸ್ಪೇಸ್ನೊಂದಿಗಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಮತ್ತು ಮಾರ್ಚ್ 2026ರೊಳಗೆ ಎಚ್ಎಎಲ್ 12 ಜೆಟ್ ಇಂಜಿನ್ಗಳನ್ನು ಸ್ವೀಕರಿಸಲಿದೆ. ಈವರೆಗೆ ಆರು ವಿಮಾನಗಳು ಸಿದ್ಧಗೊಂಡಿವೆ,ನಮ್ಮ ಕಡೆಯಿಂದ ಯಾವುದೇ ಲೋಪವಿಲ್ಲ. ಮಾರ್ಚ್ 2026ರೊಳಗೆ ನಾವು ಐಎಎಫ್ಗೆ ವಿಮಾನಗಳನ್ನು ಪೂರೈಸುವ ಸ್ಥಿತಿಯಲ್ಲಿರುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ ’ ಎಂದು ಅವರು ಹೇಳಿದರು.
ಜಿಇ ಏರೋಸ್ಪೇಸ್ನಿಂದ ಸಕಾಲಕ್ಕೆ ಇಂಜಿನ್ಗಳ ಪೂರೈಕೆ ಮುಂದುವರಿದರೆ ಮುಂದಿನ ವರ್ಷ 16 ಜೆಟ್ ವಿಮಾನಗಳನ್ನು ಉತ್ಪಾದಿಸಲು ಎಚ್ಎಎಲ್ ಯೋಜಿಸಿದೆ.
ಫೆಬ್ರವರಿ 2021ರಲ್ಲಿ ರಕ್ಷಣಾ ಸಚಿವಾಲಯವು ಐಎಎಫ್ಗಾಗಿ 83 ತೇಜಸ್ ಎಂಕೆ-1ಎ ಜೆಟ್ಗಳ ಖರೀದಿಗೆ ಎಚ್ಎಎಲ್ ಜೊತೆ 48,000 ಕೋ.ರೂ.ಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಸಚಿವಾಲಯವು ಸುಮಾರು 67,000 ಕೋ.ರೂ.ವೆಚ್ಚದಲ್ಲಿ ಇನ್ನೂ 97 ಎಲ್ಸಿಎ ಎಂಕೆ-1ಎಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿಯೂ ತೊಡಗಿಕೊಂಡಿದೆ.
ಐಎಎಫ್ನ ಮಿಗ್-21 ಯುದ್ಧವಿಮಾನಗಳಿಗೆ ಬದಲಿಯಾಗಿ ಸಿಂಗಲ್ ಇಂಜಿನ್ ಎಂಕೆ-1ಎ ಜೆಟ್ಗಳು ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ.
ತೇಜಸ್ ಎಂಕೆ-1ಎ ವಿಶ್ವದರ್ಜೆಯ ವಿಮಾನವಾಗಿದ್ದು,ಉತ್ತಮ ಗುಣಮಟ್ಟದ ರಾಡಾರ್,ವಿದ್ಯುನ್ಮಾನ ಯುದ್ಧ ದಿರಿಸುಗಳು ಮತ್ತು ಕ್ಷಿಪಣಿಗಳ ಬತ್ತಳಿಕೆಯನ್ನು ಒಳಗೊಂಡಿದೆ ಎಂದು ಹೇಳಿದ ಸುನಿಲ್, ಹಲವಾರು ದೇಶಗಳು ತೇಜಸ್ ಖರೀದಿಗೆ ಆಸಕ್ತಿಯನ್ನು ತೋರಿಸಿವೆ ಮತ್ತು ಅವುಗಳಲ್ಲಿ ಕೆಲವು ದೇಶಗಳೊಂದಿಗೆ ಕಂಪನಿಯು ಮಾತುಕತೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.