ಮಧ್ಯಪ್ರದೇಶ | 51 ಕೋಟಿ ರೂ. ಗಣಿಗಾರಿಕೆ ದಂಡವನ್ನು 4,000ಕ್ಕೆ ಇಳಿಕೆ ಮಾಡಿದ ವಿವಾದ; ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಡಾ. ನಾಗಾರ್ಜುನ ಬಿ. ಗೌಡ ಹೇಳಿದ್ದೇನು?

Photo Credit : indianmasterminds.com
ಭೋಪಾಲ್, ಅ. 10: ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಗಣಿಗಾರಿಕೆ ದಂಡ ವಿವಾದಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಡಾ. ನಾಗಾರ್ಜುನ ಬಿ. ಗೌಡ ಅವರು ಮೊದಲ ಬಾರಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿದ್ದು, ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
“ದಂಡ ಕಡಿತದ ನಿರ್ಧಾರವು ಸಂಪೂರ್ಣವಾಗಿ ದಾಖಲೆಗಳು ಮತ್ತು ಕಾನೂನುಬದ್ಧ ಕ್ರಮದ ಆಧಾರದ ಮೇಲೆಯೇ ಮಾಡಲಾಗಿದೆ,” ಎಂದು ಅವರು ಹೇಳಿದ್ದಾರೆ.
ಖಾಂಡ್ವಾ ಜಿಲ್ಲಾ ಪಂಚಾಯತ್ನ ಸಿಇಒ ಆಗಿರುವ ಡಾ. ನಾಗಾರ್ಜುನ ಬಿ. ಗೌಡ ಅವರು ಹರ್ದಾದ ಎಡಿಎಂ ಆಗಿದ್ದ ಅವಧಿಯಲ್ಲಿ ಈ ವಿವಾದ ಬೆಳಕಿಗೆ ಬಂದಿತ್ತು. ಆರ್ಟಿಐ ಕಾರ್ಯಕರ್ತ ಆನಂದ್ ಜಾಟ್ ಅವರ ಮಾಹಿತಿ ಪ್ರಕಾರ, ಪಾತ್ ಇಂಡಿಯಾ ಕಂಪೆನಿಗೆ ವಿಧಿಸಲಾದ 51 ಕೋಟಿ ರೂಪಾಯಿ ಅಕ್ರಮ ಗಣಿಗಾರಿಕೆ ದಂಡವನ್ನು ಕೇವಲ 4,032 ರೂಪಾಯಿಗೆ ಇಳಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಇಂದೋರ್–ಬೇತುಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ಅಂಧೇರಿಖೇಡ ಗ್ರಾಮದಲ್ಲಿ ಪಾತ್ ಇಂಡಿಯಾ ಕಂಪೆನಿಯು ಪರವಾನಿಗಿಯಿಲ್ಲದೆ ಸುಮಾರು 3.11 ಲಕ್ಷ ಘನ ಮೀಟರ್ ಜಲ್ಲಿಕಲ್ಲುಗಳನ್ನು ಅಗೆದಿದ್ದರೆಂದು ಹಿಂದಿನ ಎಡಿಎಂ ಪ್ರವೀಣ್ ಫೂಲ್ಪಗರ್ ಅವರು 51.67 ಕೋಟಿ ರೂಪಾಯಿ ದಂಡ ವಿಧಿಸಲು ನೋಟಿಸ್ ನೀಡಿದ್ದರು.
ಅವರ ವರ್ಗಾವಣೆಯ ನಂತರ ಅಧಿಕಾರ ವಹಿಸಿಕೊಂಡ ಡಾ. ನಾಗಾರ್ಜುನ ಬಿ. ಗೌಡ ಅವರ ಅವಧಿಯಲ್ಲಿ ಮರುಪರಿಶೀಲನೆ ನಡೆಸಲಾಗಿದ್ದು, ಕಂಪೆನಿಯು ಕೇವಲ 2,688 ಘನ ಮೀಟರ್ ಅಗೆತ ನಡೆಸಿದೆ ಎಂಬ ತಹಶೀಲ್ದಾರ್ ವರದಿ ಆಧಾರದ ಮೇಲೆ ದಂಡವನ್ನು 4,032 ರೂಪಾಯಿಗೆ ಇಳಿಸಲಾಯಿತು.
ಈ ಪ್ರಕರಣದಲ್ಲಿ ಗಂಭೀರ ಅಕ್ರಮಗಳು ನಡೆದಿದೆ ಎಂದು ಆರ್ಟಿಐ ಕಾರ್ಯಕರ್ತ ಆನಂದ್ ಜಾಟ್ ಅವರು ಆರೋಪಿಸಿದ್ದಾರೆ. “ದಂಡ ಕಡಿತದ ಹಿಂದೆ ರಾಜಕೀಯ ಅಥವಾ ವೈಯಕ್ತಿಕ ಒತ್ತಡ ಇರಬಹುದು” ಎಂದು ಹೇಳಿದ್ದಾರೆ. ಗಣಿಗಾರಿಕೆಯ ಸ್ಥಳದ ಯಾವುದೇ ದೃಶ್ಯ ಅಥವಾ ಛಾಯಾಚಿತ್ರ ಪುರಾವೆಗಳನ್ನು ಅಧಿಕಾರಿಗಳು ಸಂಗ್ರಹಿಸಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.
“ಹಿಂದಿನ ಎಡಿಎಂ ದಂಡ ವಿಧಿಸಿರಲಿಲ್ಲ; ಕೇವಲ ನೋಟಿಸ್ ನೀಡಲಾಗಿತ್ತು. ಅಂತಿಮ ವಿಚಾರಣೆ ನಾನು ಅಧಿಕಾರ ವಹಿಸಿಕೊಳ್ಳುವ ಮೊದಲು ನಡೆದಿತ್ತು. ತಹಶೀಲ್ದಾರ್ ವರದಿ ಹಾಗೂ ಪಂಚನಾಮದಲ್ಲಿ ದೃಢ ಪುರಾವೆಗಳ ಕೊರತೆ ಕಂಡುಬಂದ ಕಾರಣ ಕಾನೂನು ಪ್ರಕ್ರಿಯೆಯ ಪ್ರಕಾರ ಪರಿಷ್ಕೃತ ನಿರ್ಧಾರ ತೆಗೆದುಕೊಳ್ಳಲಾಯಿತು”, ಎಂದು ಡಾ. ನಾಗಾರ್ಜುನ ಬಿ. ಗೌಡ ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.
“ಈ ನಿರ್ಧಾರದ ಬಳಿಕ ಎರಡು ವರ್ಷಗಳ ಕಾಲ ಯಾವುದೇ ಮೇಲ್ಮನವಿ ಸಲ್ಲಿಸಲಿಲ್ಲ. ಆದ್ದರಿಂದ ಕ್ರಮ ಕಾನೂನುಬದ್ಧ ಹಾಗೂ ಪಾರದರ್ಶಕವಾಗಿದೆ. ತನಿಖೆ ಪ್ರಾರಂಭವಾದರೆ ಪೂರ್ಣ ಸಹಕಾರ ನೀಡಲು ನಾನು ಸಿದ್ಧನಿದ್ದೇನೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡಾ. ನಾಗಾರ್ಜುನ ಬಿ. ಗೌಡ ಯಾರು?
ಕನ್ನಡಿಗರಾದ ಡಾ. ನಾಗಾರ್ಜುನ ಬಿ. ಗೌಡ ಅವರು 2019 ರ ಬ್ಯಾಚ್ನ ಮಧ್ಯಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಕೃತಿಗಳಿಗೆ ಹಾಗೂ motivational speech ಗಳಿಗೆ ಹೆಸರುವಾಸಿಯಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಪಡೆದಿರುವ ಅವರು, 2019 ರ ಬ್ಯಾಚ್ನ ಐಎಎಸ್ ಅಧಿಕಾರಿ ಸೃಷ್ಟಿ ದೇಶಮುಖ್ ಅವರನ್ನು ವಿವಾಹವಾಗಿದ್ದಾರೆ.







