ಮಧ್ಯಪ್ರದೇಶ | ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಐಎಎಸ್ ಅಧಿಕಾರಿ : ವೀಡಿಯೊ ವೈರಲ್

Photo credit: NDTV
ಭೋಪಾಲ್: ಭಿಂಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಐಎಎಸ್ ಅಧಿಕಾರಿ ಸಂಜೀವ್ ಶ್ರೀವಾಸ್ತವ ಅವರು ವಿದ್ಯಾರ್ಥಿಯೋರ್ವನಿಗೆ ಪರೀಕ್ಷಾ ಕೊಠಡಿಯಲ್ಲಿ ಹಲವು ಬಾರಿ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಎಪ್ರಿಲ್ 1ರಂದು ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ ಬಿಎಸ್ಸಿ 2ನೇ ವರ್ಷದ ಗಣಿತ ಪರೀಕ್ಷೆಯ ಸಮಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ವಿಡಿಯೋದಲ್ಲಿ ಸಂಜೀವ್ ಶ್ರೀವಾಸ್ತವ ಅವರು ವಿದ್ಯಾರ್ಥಿಯನ್ನು ತನ್ನ ಆಸನದಿಂದ ಎಳೆದು ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದು ಕಂಡು ಬಂದಿದೆ.
ʼಕಾಲೇಜಿನಲ್ಲಿ ಸಾಮೂಹಿಕ ವಂಚನೆ ನಡೆಯುತ್ತಿದೆ ಎಂಬ ಸುಳಿವು ನಮಗೆ ಸಿಕ್ಕಿತ್ತು. ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಎಲ್ಲವೂ ಸಾಮಾನ್ಯವಾಗಿದ್ದಂತೆ ಕಂಡುಬಂದಿದೆ. ಪರೀಕ್ಷಾ ಕೊಠಡಿಯಲ್ಲಿ ಎಲ್ಲರೂ ಸದ್ದಿಲ್ಲದೆ ಕುಳಿತಿದ್ದರು. ಅದು ಗಣಿತ ಪತ್ರಿಕೆಯಾಗಿತ್ತು. ಓರ್ವ ವಿದ್ಯಾರ್ಥಿಯ ಬಳಿ ಮಾತ್ರ ಪ್ರಶ್ನೆ ಪತ್ರಿಕೆ ಇರಲಿಲ್ಲ. ಆತನನ್ನು ಪ್ರಶ್ನಿಸಿದಾಗ ಆತ ತನ್ನ ಪ್ರಶ್ನೆ ಪತ್ರಿಕೆಯನ್ನು ಉತ್ತರಕ್ಕಾಗಿ ಹೊರಗೆ ಕಳುಹಿಸಿರುವುದಾಗಿ ಹೇಳಿದ್ದಾನೆ. ಸಾಮೂಹಿಕ ನಕಲನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆʼ ಎಂದು ಶ್ರೀವಾಸ್ತವ ಅವರು ಹೇಳಿದರು.
ʼನಾನು ಶೌಚಾಲಯಕ್ಕೆ ಹೋಗಿದ್ದೆ. ನನ್ನ ಪ್ರಶ್ನೆ ಪತ್ರಿಕೆ ಮೇಜಿನ ಮೇಲಿತ್ತು. ಆದರೆ, ನಾನು ಹಿಂತಿರುಗಿದಾಗ ಅದು ಅಲ್ಲಿರಲಿಲ್ಲ. ತಕ್ಷಣ ಜಿಲ್ಲಾಧಿಕಾರಿ ಬಂದರು. ಪರಿಶೀಲನೆಯ ಸಮಯದಲ್ಲಿ ಓರ್ವ ವಿದ್ಯಾರ್ಥಿಯ ಬಳಿ ಎರಡು ಪ್ರಶ್ನೆ ಪತ್ರಿಕೆಗಳಿದ್ದವು. ನಾನು ಎರಡನೇ ಟೇಬಲ್ನಲ್ಲಿ ಕುಳಿತಿದ್ದೆ. ನನ್ನ ಬಳಿ ಪ್ರಶ್ನೆ ಪತ್ರಿಕೆ ಇರಲಿಲ್ಲ. ಸರ್ ನನ್ನನ್ನು ಎದ್ದು ನಿಲ್ಲುವಂತೆ ಮಾಡಿ, ಎರಡು ಬಾರಿ ಹೊಡೆದರು. ನಂತರ ಕೆಳಗಡೆ ಕರೆದೊಯ್ದು ಮತ್ತೆ ಹೊಡೆದರು. ನನಗೆ ನೋವಾಯಿತು, ನನ್ನ ತಂದೆಯ ಮೆಡಿಕಲ್ ಶಾಪ್ನಿಂದ ಔಷಧಿ ತೆಗೆದುಕೊಂಡೆ. ಉತ್ತರಕ್ಕಾಗಿ ಪ್ರಶ್ನೆ ಪತ್ರಿಕೆಯನ್ನು ಹೊರಗೆ ಕಳುಹಿಸಿಲ್ಲʼ ಎಂದು ವಿದ್ಯಾರ್ಥಿ ರೋಹಿತ್ ರಾಥೋಡ್ ಹೇಳಿದ್ದಾನೆ.







