ಅಪಘಾತದ ತನಿಖೆಗೆ ನೆರವು ನೀಡಲು ಕಾಕ್ ಪಿಟ್ ನಲ್ಲಿ ವೀಡಿಯೋ ಅಳವಡಿಸಬೇಕು: IATA

PC : newindianexpress.com
ಹೊಸದಿಲ್ಲಿ: ವಿಮಾನ ಅಪಘಾತದ ತನಿಖೆಗೆ ನೆರವು ನೀಡಲು ಕಾಕ್ ಪಿಟ್ ನಲ್ಲಿ ವೀಡಿಯೋ ಚಿತ್ರೀಕರಣ ಅಳವಡಿಸಬೇಕು ಎಂಬ ಬಗ್ಗೆ ಬಲವಾದ ವಾದ ಕೇಳಿ ಬರುತ್ತಿದೆ ಎಂದು ಬುಧವಾರ ಜಾಗತಿಕ ವಿಮಾನ ಯಾನ ಉದ್ಯಮ ಸಂಸ್ಥೆ ಅಂತಾರಾಷ್ಟ್ರೀಯ ವಾಯು ಪ್ರಯಾಣ ಒಕ್ಕೂಟ(IATA)ದ ಮುಖ್ಯಸ್ಥರು ಹೇಳಿದ್ದಾರೆ.
ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ವೇಳೆ ಎರಡೂ ಇಂಧನ ಸ್ವಿಚ್ ಗಳು ಕಟ್ ಆಫ್ ಆಗಿದ್ದವು ಎಂದು ಪ್ರಾಥಮಿಕ ವರದಿ ಬಿಡುಗಡೆಯಾದ ಬೆನ್ನಿಗೇ, ಅಂತಾರಾಷ್ಟ್ರೀಯ ವಾಯು ಪ್ರಯಾಣ ಒಕ್ಕೂಟ ಮುಖ್ಯಸ್ಥ ವಿಲ್ಲೀ ವಾಲ್ಷ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಭಾರತದ ವಿಮಾನ ಅಪಘಾತ ತನಿಖಾ ದಳವು ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದ್ದರೂ, ಯಾವುದೇ ನಿರ್ಣಾಯಕ ಸಂಗತಿಗಳನ್ನು ಹೇಳಿಲ್ಲ ಅಥವಾ ಜೂನ್ 12ರಂದು ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಯಾರನ್ನೂ ನಿರ್ದಿಷ್ಟವಾಗಿ ಗುರಿಯಾಗಿಸಿಲ್ಲ. ಆದರೆ, ಓರ್ವ ಪೈಲಟ್ ಮತ್ತೋರ್ವ ಪೈಲಟ್ ನನ್ನು ಇಂಧನ ಸ್ವಿಚ್ ಅನ್ನು ಯಾಕೆ ಕಟ್ ಆಫ್ ಮಾಡಿದೆ ಎಂದು ಪ್ರಶ್ನಿಸಿದ್ದು, ಅದಕ್ಕೆ ಪ್ರತಿಯಾಗಿ ಆತ, ನಾನು ಹಾಗೆ ಮಾಡಿಲ್ಲ ಎಂದು ಪ್ರತಿಕ್ರಿಯಿಸಿರುವುದು ಕಾಕ್ ಪಿಟ್ ಆಡಿಯೊ ಧ್ವನಿಮುದ್ರಣದಲ್ಲಿ ಕೇಳಿ ಬಂದಿದೆ ಎಂದು ಹೇಳಲಾಗಿತ್ತು.
ಈ ಅಪಘಾತದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 242 ಪ್ರಯಾಣಿಕರ ಪೈಕಿ ಓರ್ವ ಪ್ರಯಾಣಿಕನನ್ನು ಹೊರತುಪಡಿಸಿ, ಉಳಿದೆಲ್ಲ ಪ್ರಯಾಣಿಕರು ಮೃತಪಟ್ಟರೆ, ಓರ್ವ ಪ್ರಯಾಣಿಕ ಮಾತ್ರ ಪವಾಡ ಸದೃಶವಾಗಿ ಬದುಕುಳಿದಿದ್ದರು. ವಿಮಾನ ಪತನವಾದ ಪ್ರದೇಶದಲ್ಲಿದ್ದ 19 ಮಂದಿ ಸೇರಿ ಒಟ್ಟು 260 ಮಂದಿ ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು.
“ಕಾಕ್ ಪಿಟ್ ನಲ್ಲಿ ವೀಡಿಯೋ ಅಳವಡಿಸುವುದಕ್ಕೆ ಪೈಲಟ್ ಗಳು ವೈಯಕ್ತಿಕವಾಗಿ ವಿರೋಧವಾಗಿದ್ದಾರೆ ಎಂಬ ಸಂಗತಿ ನನಗೆ ತಿಳಿದಿದೆ. ಆದರೆ, ವೈಯಕ್ತಿಕ ನೆಲೆಯಲ್ಲಿ ಹೇಳುವುದಾದರೆ, ನಾವು ಈ ಕುರಿತು ಅಂತಾರಾಷ್ಟ್ರೀಯ ವಾಯು ಪ್ರಯಾಣ ಒಕ್ಕೂಟದ ಸಭೆಯಲ್ಲಿ ಚರ್ಚಿಸಿಲ್ಲವಾದರೂ, ವಿಮಾನ ಅಪಘಾತ ತನಿಖೆಗೆ ನೆರವು ನೀಡಲು ಕಾಕ್ ಪಿಟ್ ನಲ್ಲಿ ವೀಡಿಯೋ ಅಳವಡಿಸಬೇಕು ಎಂಬ ಬಲವಾದ ಆಗ್ರಹ ಕೇಳಿ ಬರುತ್ತಿದೆ” ಎಂದು ವಾಣಿಜ್ಯ ವಿಮಾನಗಳ ಮಾಜಿ ಪೈಲಟ್ ವಿಲ್ಲೀ ವಾಲ್ಷ್ ಹೇಳಿದ್ದಾರೆ.
“ಧ್ವನಿಮುದ್ರಣದೊಂದಿಗೆ ವೀಡಿಯೋ ಚಿತ್ರೀಕರಣ ಕೂಡಾ ವಿಮಾನ ಅಪಘಾತ ಸಂಭವಿಸಿದ ವೇಳೆ, ವಿಮಾನ ಅಪಘಾತದ ಕುರಿತು ತನಿಖೆ ನಡೆಸುವ ತನಿಖಾಧಿಕಾರಿಗಳಿಗೆ ಮಹತ್ವದ ನೆರವು ಒದಗಿಸುತ್ತದೆ ಎಂಬುದು ಬಹುತೇಕ ವಾಸ್ತವ ಸಂಗತಿಯಾಗಿದೆ” ಎಂದೂ ಅವರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ವಾಯು ಯಾನ ಒಕ್ಕೂಟವೇನಾದರೂ ಇಂಜಿನ್ ನ ಇಂಧನ ಸ್ವಿಚ್ ಆಕಸ್ಮಿಕವಾಗಿ ಕಟ್ ಆಫ್ ಆಗುವುದನ್ನು ತಡೆಯಲು ಕಾಕ್ ಪಿಟ್ ಅನ್ನು ಮರು ವಿನ್ಯಾಸಗೊಳಿಸುವಂತೆ ಶಿಫಾರಸು ಮಾಡುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾವಿನ್ನೂ ವಿಸ್ತೃತ ವರದಿಗಾಗಿ ಕಾಯಬೇಕಿದೆ ಹಾಗೂ ಈ ಕುರಿತು ಈಗಲೇ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು” ಎಂದು ಪ್ರತಿಕ್ರಿಯಿಸಿದ್ದಾರೆ.







