ಮ್ಯಾಚ್ ಫಿಕ್ಸಿಂಗ್: ಶ್ರೀಲಂಕಾದ ಮಾಜಿ ದೇಶೀಯ ಕ್ರಿಕೆಟಿಗನಿಗೆ 5 ವರ್ಷ ನಿಷೇಧ ಹೇರಿದ ಐಸಿಸಿ

ಸಾಲಿಯಾ ಸಮನ್ | PC ; X
ಹೊಸದಿಲ್ಲಿ, ಆ.15: ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ(ಇಸಿಬಿ)ಭ್ರಷ್ಟಾಚಾರ ವಿರೋಧಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ದೇಶೀಯ ಕ್ರಿಕೆಟಿಗ ಸಾಲಿಯಾ ಸಮನ್ ಅವರನ್ನು ಐಸಿಸಿ ಭ್ರಷ್ಟಾಚಾರ ವಿರೋಧಿ ನ್ಯಾಯ ಮಂಡಳಿಯು ಐದು ವರ್ಷಗಳ ಕಾಲ ಎಲ್ಲ ಕ್ರಿಕೆಟ್ನಿಂದ ನಿಷೇಧಿಸಿದೆ.
ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ 2023ರ ಸೆಪ್ಟಂಬರ್ನಲ್ಲಿ ಎಂಟು ವ್ಯಕ್ತಿಗಳ ಮೇಲೆ ಆರೋಪ ಹೊರಿಸಲಾಗಿದ್ದು, ಈ ಪೈಕಿ ಸಮನ್ ಕೂಡ ಒಬ್ಬರು. ಸಮನ್ ನಿಷೇಧದ ಅವಧಿಯು 2023ರ ಸೆ.13ರಿಂದ ಆರಂಭವಾಗಿದ್ದು, ಆಗ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಅಂದರೆ ಸಮನ್ ಈಗಾಗಲೇ ತಮ್ಮ ಶಿಕ್ಷೆಯ ಎರಡು ವರ್ಷಗಳನ್ನು ಪೂರೈಸಿದ್ದಾರೆ.
101 ಪ್ರಥಮ ದರ್ಜೆ ಪಂದ್ಯಗಳು ಹಾಗೂ 77 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ 39ರ ವಯಸ್ಸಿನ ಸಮನ್ ಅವರು 2021ರ ಅಬುಧಾಬಿ ಟಿ-10 ಕ್ರಿಕೆಟ್ ಲೀಗ್ಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸಿದ್ದಾರೆ. ಆ ಪಂದ್ಯಾವಳಿಯನ್ನು ಭ್ರಷ್ಟಗೊಳಿಸಲು ಯತ್ನಿಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ.





