ಉಳಿತಾಯ ಖಾತೆಗಳ ಕನಿಷ್ಠ ಬ್ಯಾಲನ್ಸ್ 50,000 ರೂ.ಗೆ ಏರಿಸಿದ ಐಸಿಐಸಿಐ

ಐಸಿಐಸಿಐ ಬ್ಯಾಂಕ್ | PC : PTI
ಮುಂಬೈ, ಆ. 9: ಖಾಸಗಿ ಕ್ಷೇತ್ರದ ಅಗ್ರಗಣ್ಯ ಬ್ಯಾಂಕ್ಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್ ಶನಿವಾರ ತನ್ನ ಎಲ್ಲಾ ಶಾಖೆಗಳ ಉಳಿತಾಯ ಖಾತೆಗಳ ಕನಿಷ್ಠ ಸರಾಸರಿ ಉಳಿತಾಯ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ.
ನೂತನ ನಿಯಮವು ಆಗಸ್ಟ್ ಒಂದರಿಂದಲೇ ಜಾರಿಗೆ ಬಂದಿದೆ.
ಮೆಟ್ರೊ ಮತ್ತು ನಗರ ಪ್ರದೇಶಗಳ ಗ್ರಾಹಕರಿಗೆ ಕನಿಷ್ಠ ಸರಾಸರಿ ಉಳಿತಾಯ ಮೊತ್ತವನ್ನು ಈಗಿನ 10,000 ರೂ.ನಿಂದ 50,000 ರೂ.ಗೆ ಏರಿಸಲಾಗಿದೆ. ಅರೆ-ನಗರ ಪ್ರದೇಶಗಳಲ್ಲಿ ಈ ಮೊತ್ತವನ್ನು ಈಗಿನ 5,000 ರೂ.ಯಿಂದ 25,000 ರೂ.ಗೆ ಹೆಚ್ಚಿಸಲಾಗಿದೆ. ಅದೇ ವೇಳೆ, ಗ್ರಾಮೀಣ ಶಾಖೆಗಳಲ್ಲಿ, ಈ ಮೊತ್ತವನ್ನು ಈಗಿನ 2,500 ರೂ.ಯಿಂದ 10,000 ರೂ.ಗೆ ಏರಿಕೆ ಮಾಡಲಾಗಿದೆ.
ಕನಿಷ್ಠ ಉಳಿತಾಯ ಮೊತ್ತದಲ್ಲಿನ ಗಣನೀಯ ಏರಿಕೆಯು ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಭಾರೀ ಸಂಖ್ಯೆಯ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ತಮ್ಮ ಖಾತೆಗಳಲ್ಲಿ ಕನಿಷ್ಠ ಅಗತ್ಯ ಮೊತ್ತವನ್ನು ಹೊಂದಲು ಸಾಧ್ಯವಾಗದ ಗ್ರಾಹಕರು ದಂಡವನ್ನು ಪಾವತಿಸಬೇಕಾಗಬಹುದು. ಇದು ಕಡಿಮೆ ಆದಾಯದ ಖಾತೆದಾರರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ.





